


ಡೈಲಿವಾರ್ತೆ: 25/ಜೂ./2026


ಮುತ್ತತ್ತಿಯಲ್ಲಿ ಸೆಲ್ಫಿ ದುರಂತ: ಕಾವೇರಿ ಒಡಲು ಸೇರಿದ ಬೆಂಗಳೂರು ಮೂಲದ ಒಂದೇ ಕುಟುಂಬದ ನಾಲ್ವರು ಮಹಿಳೆಯರು ಹಾಗೂ ಚಾಲಕ ಸೇರಿ ಐದು ಜೀವಗಳು

ಮಂಡ್ಯ: ಪ್ರವಾಸಿ ತಾಣಗಳಲ್ಲಿ ಸೆಲ್ಫಿ ವ್ಯಾಮೋಹಕ್ಕೆ ಅಮಾಯಕ ಜೀವಗಳು ಬಲಿಯಾಗುತ್ತಿರುವ ದಾರುಣ ಸರಣಿಗೆ ಮತ್ತೊಂದು ಕರಾಳ ಅಧ್ಯಾಯ ಸೇರ್ಪಡೆಯಾಗಿದೆ. ಮಂಡ್ಯ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮುತ್ತತ್ತಿ ಬಳಿ ಕಾವೇರಿ ನದಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕಾಲು ಜಾರಿ, ನೀರಿನ ಬಲವಾದ ಸೆಳೆತಕ್ಕೆ ಸಿಲುಕಿ ಬೆಂಗಳೂರು ಮೂಲದ ಒಂದೇ ಕುಟುಂಬದ ನಾಲ್ವರು ಮಹಿಳೆಯರು ಹಾಗೂ ಕಾರಿನ ಚಾಲಕ ಸೇರಿ ಒಟ್ಟು ಐವರು ಜಲಸಮಾಧಿಯಾದ ಅತ್ಯಂತ ಗಂಭೀರ ಹಾಗೂ ದಾರುಣ ಘಟನೆ ಬುಧವಾರ ಸಂಜೆ ಸಂಭವಿಸಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಜಗದಪುರ ಗ್ರಾಮದ ನಿವಾಸಿಗಳಾದ ವಿಜಯಮ್ಮ (52), ಅವರ ಪುತ್ರಿ ಪ್ರಿಯಾಂಕಾ, ಮತ್ತೊಬ್ಬ ಮಹಿಳೆ ಶ್ವೇತಾ (38) ಹಾಗೂ ಅವರ ಪುತ್ರಿ ಚೈತ್ರಾ (20) ಮತ್ತು ಬೆಂಗಳೂರು ಮೂಲದ ಕಾರು ಚಾಲಕ ಮಹೇಶ್ (30) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಒಂದೇ ಕುಟುಂಬದ ನಾಲ್ವರು ಕಣ್ಣಮುಂದೆಯೇ ಸಾವನ್ನಪ್ಪಿರುವುದು ಇಡೀ ಗ್ರಾಮದಲ್ಲಿ ಕಣ್ಣೀರಿನ ಕಡಲನ್ನು ಉಂಟುಮಾಡಿದೆ.
ಸಂಭ್ರಮದ ಔತಣಕೂಟ ಮುಗಿಸಿ ಬಂದವರಿಗೆ ಕಾದಿತ್ತು ಕರಾಳ ವಿಧಿ:
ಪೊಲೀಸ್ ಮೂಲಗಳ ಪ್ರಕಾರ, ಮೃತ ಕುಟುಂಬಸ್ಥರು ಕಬ್ಬಾಳು ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಬೀಗರ ಔತಣಕೂಟದಲ್ಲಿ ಭಾಗವಹಿಸಲು ಆಗಮಿಸಿದ್ದರು. ಅಲ್ಲಿ ಪೂಜೆ ಸಲ್ಲಿಸಿದ ನಂತರ, ಸಮೀಪದ ಮಳವಳ್ಳಿ ತಾಲೂಕಿನ ಮುತ್ತತ್ತಿ ಪ್ರವಾಸಿ ತಾಣಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ತದನಂತರ ಕಾವೇರಿ ನದಿಯ ತಟಕ್ಕೆ ತೆರಳಿದ ಅವರು, ನದಿಯ ಹಿನ್ನೆಲೆಯಲ್ಲಿ ಸುಂದರ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಗೀಳಿನಲ್ಲಿ ಅಕಸ್ಮಿಕವಾಗಿ ಕಾಲು ಜಾರಿ ನಾಲ್ವರು ಮಹಿಳೆಯರು ನದಿಯ ವೇಗದ ಹರಿವಿಗೆ ಕೊಚ್ಚಿ ಹೋಗಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಕಾರು ಚಾಲಕ ಮಹೇಶ್ ಅವರು ಮಹಿಳೆಯರನ್ನು ರಕ್ಷಿಸಲು ನದಿಗೆ ಧುಮುಕಿದ್ದಾರಾದರೂ, ನೀರಿನ ತೀವ್ರ ಸೆಳೆತಕ್ಕೆ ಸಿಲುಕಿ ಅವರೂ ಕೂಡ ಜಲಸಮಾಧಿಯಾಗಿದ್ದಾರೆ.
ಘಟನೆಯ ಭೀಕರತೆ ತಿಳಿಯುತ್ತಿದ್ದಂತೆ ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕಿ ವಿ.ಜೆ. ಶೋಭಾರಾಣಿ, ಡಿವೈಎಸ್ಪಿ ಯಶವಂತ್ ಕುಮಾರ್ ಹಾಗೂ ಹಲಗೂರು ಪೊಲೀಸ್ ಠಾಣೆಯ ಪಿಎಸ್‌ಐ ಲೋಕೇಶ್ ಅವರು ತಕ್ಷಣವೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನೀರಿನಲ್ಲಿ ಮುಳುಗಿದ್ದ ಐದೂ ಮೃತದೇಹಗಳನ್ನು ನುರಿತ ಈಜುಗಾರರ ಮತ್ತು ಸ್ಥಳೀಯರ ಸತತ ಪ್ರಯತ್ನದಿಂದ ಬುಧವಾರ ರಾತ್ರಿ ಸುಮಾರು 7 ಗಂಟೆಯ ವೇಳೆಗೆ ಹೊರತೆಗೆಯಲಾಗಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕ್ರಿಯೆಗಳು ಮುಗಿದ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಗುವುದು.