ಡೈಲಿವಾರ್ತೆ: 28/ಜೂ./2026

ಭಟ್ಕಳ: ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಬೈಕ್; ಭಜರಂಗದಳದ ಸಕ್ರಿಯ ಕಾರ್ಯಕರ್ತ ಸ್ಥಳದಲ್ಲೇ ದಾರುಣ ಸಾವು


​ಭಟ್ಕಳ: ನಗರದ ಬಂದರ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ ಭೀಕರ ಬೈಕ್ ಅಪಘಾತವೊಂದು ಸಂಭವಿಸಿದ್ದು, ಅತೀ ವೇಗವಾಗಿ ಬಂದ ದ್ವಿಚಕ್ರ ವಾಹನವೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಗುದ್ದಿದ ಪರಿಣಾಮ ಬೈಕ್‌ನ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.


​ತಾಲೂಕಿನ ಸಬ್ಬತ್ತಿ ನಿವಾಸಿ, ಭಜರಂಗದಳದ ಸಕ್ರಿಯ ಕಾರ್ಯಕರ್ತ ಮಧುರ ಮಂಜುನಾಥ ನಾಯ್ಕ (24) ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಬೈಕ್ ಚಲಾಯಿಸುತ್ತಿದ್ದ ಬೆಳ್ಕೆ ಗರಡಿಹಿತ್ಲು ನಿವಾಸಿ ಸುಮೇದ ನಾರಾಯಣ ನಾಯ್ಕ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

​ಮೃತ ಮಧುರ ನಾಯ್ಕ ಅವರು ಸ್ಥಳೀಯವಾಗಿ ಭಜರಂಗದಳದ ಸಕ್ರಿಯ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದರು. ಅವರ ಆಕಸ್ಮಿಕ ಮರಣದ ಸುದ್ದಿ ತಿಳಿಯುತ್ತಿದ್ದಂತೆ ತಾಲೂಕಿನ ನೂರಾರು ಸಾರ್ವಜನಿಕರು ಹಾಗೂ ಸಂಘಟನೆಯ ಪ್ರಮುಖರು ಭಟ್ಕಳದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಜಮಾಯಿಸಿದರು. ಮೃತರ ಅಕಾಲಿಕ ನಿಧನಕ್ಕೆ ತೀವ್ರ ಸಂತಾಪ ಹಾಗೂ ಕಣ್ಣೀರಿನ ವಿದಾಯ ಕೋರಿದರು.

​ಈಗಾಗಲೇ ತಂದೆಯನ್ನು ಕಳೆದುಕೊಂಡು ಇಡೀ ಕುಟುಂಬಕ್ಕೆ ಆಸರೆಯಾಗಿದ್ದ ಮಧುರ ನಾಯ್ಕ ಅವರ ಈ ಅಕಾಲಿಕ ಸಾವು ಆತನ ಕುಟುಂಬಕ್ಕೆ ಅರಗಿಸಿಕೊಳ್ಳಲಾಗದ ಕಟು ಸತ್ಯವಾಗಿದೆ. ಮನೆಗೆ ಆಧಾರಸ್ತಂಭವಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮವೇ ಕಣ್ಣೀರಲ್ಲಿ ಮುಳುಗಿದೆ. ಕಣ್ಣೆದುರೇ ಮಗ ಶವವಾಗಿ ಬಿದ್ದಿರುವುದನ್ನು ಕಂಡು ಹೆತ್ತ ಕರುಳು ಪಡುತ್ತಿರುವ ಪಾಡು ನೆರೆದಿದ್ದವರ ಕಣ್ಣಾಲಿಗಳನ್ನು ಒದ್ದೆಯಾಗಿಸುವಂತಿತ್ತು.

ಘಟನೆಗೆ ಸಂಬಂಧಿಸಿದಂತೆ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ಕೈಗೊಂಡಿದ್ದಾರೆ.