ಡೈಲಿವಾರ್ತೆ: 15/ಜು./2026

ಸಿಸಿಬಿ ಪೊಲೀಸ್ ಸೋಗಿನಲ್ಲಿ ಜಿಮ್ ತರಬೇತುದಾರನ ಅಪಹರಣ – ಐದು ಲಕ್ಷಕ್ಕೆ ಬೇಡಿಕೆ, ರೌಡಿಶೀಟರ್ ಸೇರಿ ಐವರ ಬಂಧನ

ಬೆಂಗಳೂರು: ಸಿಸಿಬಿ ಪೊಲೀಸ್ ಸೋಗಿನಲ್ಲಿ ಜಿಮ್ ತರಬೇತುದಾರನನ್ನು ಅಪಹರಿಸಿ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿ ಐದು ಲಕ್ಷ ಹಣವನ್ನು ವಸೂಲಿ ಮಾಡಲು ಯತ್ನಿಸಿದ ಪ್ರಕರಣವನ್ನು ಬೆಂಗಳೂರು ಸಿಸಿಬಿ ಪೊಲೀಸರು ಬೇಧಿಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ರೌಡಿಶೀಟರ್ ತ್ರಿವೇಣ್ ಕುಮಾರ್ ಆಲಿಯಾಸ್ ತಿರುಮಲ, ರಂಜಿತ್ ರಾವ್, ನಮಿತ್, ಪ್ರೇಮ್ ಸಾಯಿ, ಹಾಗೂ ಶಾಂತಕುಮಾರ್ ಎಂದು ಗುರುತಿಸಲಾಗಿದೆ.
ಈ ಆರೋಪಿಗಳ ವಿರುದ್ಧ ಹಿಂದೆಯೂ ಕೂಡ ಕೊಲೆ, ಕೊಲೆಯತ್ನ, ದರೋಡೆ ಸೇರಿದಂತೆ ಹಲವು ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಘಟನೆ ವಿವರ:
ಜಿಮ್ ತರಬೇತುದಾರ ಮಿಥುಲ್ ಆಟೋ ರಿಕ್ಷಾದಲ್ಲಿ ತೆರಳುತ್ತಿದ್ದ ವೇಳೆ ಆರೋಪಿಗಳು ತಮ್ಮನ್ನು ಸಿಸಿಬಿ ಪೊಲೀಸರು ಎಂದು ಪರಿಚಯಿಸಿಕೊಂಡು ಬಲವಂತವಾಗಿ ಕಾರಿಗೆ ಎಳೆದುಕೊಂಡು ಹೋಗಿದ್ದರು. ಅಲ್ಲದೆ 500 ಕೆಜಿ ಗಾಂಜಾ ತರಿಸಿದ್ದೆಯಾ ಎಂದು ಬೆದರಿಸಿ ಅವರ ಮೊಬೈಲ್ ಫೋನ್ ಹಾಗೂ ಬ್ಯಾಗನ್ನು ಕಸಿದುಕೊಂಡಿದ್ದರು. LSD ಸ್ಟ್ರಿಪ್ಸ್ ಇಟ್ಟು ಫೋಟೋ ತೆಗೆದು NDPS ಕಾಯ್ದೆಯಡಿಯಲ್ಲಿ ಪ್ರಕರಣದ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು ಅಲ್ಲದೆ ಜೆಪಿ ನಗರ ಪೊಲೀಸ್ ಠಾಣೆ ಬಳಿ ಕಾರು ನಿಲ್ಲಿಸಿ ಇಬ್ಬರು ಆರೋಪಿಗಳು ಠಾಣೆಯೊಳಗೆ ಹೋಗಿ ಬಂದು ಸಾಹೇಬರು ಬಿಸಿಯಾಗಿದ್ದಾರೆ ಎಂದು ಹೇಳುವ ಮೂಲಕ ತಮ್ಮನ್ನು ನಿಜವಾದ ಪೊಲೀಸ್ ಅಧಿಕಾರಿಗಳೆಂದು ನಂಬಿಸುವ ಪ್ರಯತ್ನ ಮಾಡಿರುವುದು ತನಿಖೆಯಲ್ಲಿ ಬಹಿರಂಗಗೊಂಡಿದೆ.

ಆರೋಪಿಗಳು ಸುಮಾರು ನಾಲ್ಕು ಗಂಟೆಗಳ ಕಾಲ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಕಾರಿನಲ್ಲಿ ಸುತ್ತಾಡಿಸಿ ಐದು ಲಕ್ಷ ನೀಡದಿದ್ದರೆ ಡ್ರಗ್ಸ್ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ತಿಳಿದು ಬಂದಿದೆ.

ಈ ಪ್ರಕರಣ ಸಂಬಂಧ ಜೂನ್ 22ರಂದು ಶಂಕರಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಬಳಿಕ ಹೆಚ್ಚಿನ ತನಿಖೆಗಾಗಿ ಸಿಸಿಬಿ ಪೊಲೀಸರಿಗೆ ವರ್ಗಾಯಿಸಲಾಯಿತು.
ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ಸಾಕ್ಷಿಗಳ ಆಧಾರದಲ್ಲಿ ತನಿಖೆ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.