


ಡೈಲಿವಾರ್ತೆ: 15/ಜು./2026


ಮುರ್ಡೇಶ್ವರ: ಬೈಕ್‌ಗೆ ಲಾರಿ ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು, ಹೆದ್ದಾರಿಯ ಕಳಪೆ ಕಾಮಗಾರಿ ವಿರುದ್ಧ ಸಾರ್ವಜನಿಕರಿಂದ ರಸ್ತೆತಡೆ ಹಾಗೂ ಪ್ರತಿಭಟನೆ

ಭಟ್ಕಳ, ಜುಲೈ 15: ಲಾರಿಯೊಂದು ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಭಟ್ಕಳ ತಾಲೂಕಿನ ಮುರ್ಡೇಶ್ವರ ಬಸ್ತಿ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದೆ.
ಮೃತ ಬೈಕ್ ಸವಾರನನ್ನು ಮುರ್ಡೇಶ್ವರದ ಸಪ್ಪಟ್ಟಿ ಪ್ರದೇಶದ ನಿವಾಸಿ ಕೃಷ್ಣ ಶಿನ್ಯಾರ್ ನಾಯಕ್ (55) ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ, ಕೃಷ್ಣ ಶಿನ್ಯಾರ್ ನಾಯಕ್ ತನ್ನ ಬೈಕ್ ನಲ್ಲಿ ಭಟ್ಕಳದಿಂದ ಮುರ್ಡೇಶ್ವರಕ್ಕೆ ಹೋಗಲೆಂದು ಬಸ್ತಿ ಜಂಕ್ಷನ್‌ನಲ್ಲಿ ರಸ್ತೆ ದಾಟಲು ಬೈಕ್ ಅನ್ನು ನಿಲ್ಲಿಸಿದಾಗ ಹಿಂದಿನಿಂದ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ
ಲಾರಿ ಅವರ ಬೈಕ್‌ಗೆ ನೇರ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಅವರು ರಸ್ತೆಗೆ ಬಿದ್ದು ಲಾರಿಯ ಅಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತ ಸಂಭವಿಸಿದ ತಕ್ಷಣ ಆಕ್ರೋಶಗೊಂಡ ಸ್ಥಳೀಯರು ನೂರಾರು ಮಂದಿ ಜಮಾಯಿಸಿ ಪ್ರತಿಭಟನೆ ನಡೆಸಿ ಅಪಘಾತಕ್ಕೆ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ರಸ್ತೆ ಅವೈಜ್ಞಾನಿಕ ಮತ್ತು ಕಳಪೆ ಗುಣಮಟ್ಟದ ಕಾಮಗಾರಿಯೇ ಕಾರಣವಾಗಿದ್ದು ಈ ಸ್ಥಳದಲ್ಲಿ ಅಪಘಾತಗಳು ಆಗಾಗ್ಗೆ ಸಂಭವಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು ಅಲ್ಲಿಯವರೆಗೂ ಲಾರಿಯ ಆಡಿ ಸಿಲುಕಿಕೊಂಡಿದ್ದ ಬೈಕ್ ಮತ್ತು ಮೃತ ದೇಹವನ್ನು ತೆಗೆಯಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ತಡೆದರು. ಹೆದ್ದಾರಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಅಪಘಾತದ ಬಗ್ಗೆ ಮಾಹಿತಿ ಪಡೆದ ತಕ್ಷಣ ಮುರ್ಡೇಶ್ವರ ಮತ್ತು ಭಟ್ಕಳ ಪೊಲೀಸರ ತಂಡಗಳು ಸ್ಥಳಕ್ಕೆ ತಲುಪಿದವು. ನಂತರ, ಭಟ್ಕಳ ಡಿವೈಎಸ್ಪಿ, ಪೊಲೀಸ್ ಇನ್ಸ್‌ಪೆಕ್ಟರ್‌ಗಳು, ಸಹಾಯಕ ಆಯುಕ್ತರು, ತಹಸೀಲ್ದಾರ್ ಮತ್ತು ಇತರ ಹಿರಿಯ ಆಡಳಿತ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ನಂತರ, ಐಆರ್‌ಬಿ ಎಂಜಿನಿಯರ್ ಕೂಡ ಸ್ಥಳಕ್ಕೆ ತಲುಪಿ ಸಾರ್ವಜನಿಕರೊಂದಿಗೆ
ನೇರವಾಗಿ ಸಂವಹನ ನಡೆಸಿ ಅಪಘಾತಗಳನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮಗಳ ಬಗ್ಗೆ ಭರವಸೆ ನೀಡಿ ಪ್ರತಿಭಟನಕಾರರ ಮನವೊಲಿಸಿದರು.
ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಯಿತು.
ಮುಡೇಶ್ವರ ಪೊಲೀಸ್ ಠಾಣೆಯಲ್ಲಿ ಅಪಘಾತದ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.