


ಡೈಲಿವಾರ್ತೆ: 19/ಜು./2026


ಉಡುಪಿಯಲ್ಲಿ ಸೈಬರ್ ವಂಚನೆ ಪ್ರಕರಣ: ಹಿರಿಯ ಮಹಿಳೆಗೆ ಬರೋಬ್ಬರಿ 65 ಲಕ್ಷ ರೂ. ವಂಚನೆ
ಉಡುಪಿ: ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಮುಂಬೈ ಪೊಲೀಸ್ ಅಧಿಕಾರಿಗಳೆಂದು ನಂಬಿಸಿ, ವಾಟ್ಸಪ್ ವಿಡಿಯೋ ಕರೆ ಮೂಲಕ ಹಿರಿಯ ಮಹಿಳೆಯೊಬ್ಬರಿಂದ ಬರೋಬ್ಬರಿ 65 ಲಕ್ಷ ರೂಪಾಯಿ ಹಣವನ್ನು ವಂಚಕರು ಕಸಿದುಕೊಂಡಿದ್ದಾರೆ.
ಉಡುಪಿ ಜಿಲ್ಲೆಯ 66 ವರ್ಷದ ಶೀಲಾ ಅವರಿಗೆ ಜುಲೈ 13ರಂದು ಮುಂಬೈ ಪೊಲೀಸ್ ಡಿಪಾರ್ಟ್‌ಮೆಂಟ್ ಹೆಸರಿನಲ್ಲಿ ವಾಟ್ಸಪ್ ಸಂದೇಶ ಬಂದಿದೆ. ಬಳಿಕ ಪೊಲೀಸ್ ಸಮವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬ ವಿಡಿಯೋ ಕರೆ ಮಾಡಿ, ತಾನು ಮುಂಬೈ ಕೊಲಬಾ ಪೊಲೀಸ್ ಇನ್ಸ್‌ಪೆಕ್ಟರ್ ಎಂದು ಪರಿಚಯಿಸಿಕೊಂಡಿದ್ದಾನೆ.
ನಿಮ್ಮ ಕೆನರಾ ಬ್ಯಾಂಕ್ ಖಾತೆಗೆ 20 ಕೋಟಿ ರೂಪಾಯಿ ಜಮೆಯಾಗಿದೆ, ಈ ಸಂಬಂಧ ನಿಮ್ಮ ವಿರುದ್ಧ ವಾರಂಟ್ ಹೊರಡಿಸಲಾಗಿದೆ. ಮಂಗಳೂರು ಪೊಲೀಸರು ನಿಮ್ಮನ್ನು ಬಂಧಿಸಲಿದ್ದಾರೆ ಎಂದು ಹೆದರಿಸಿ, ವಿವಿಧ ಬ್ಯಾಂಕ್ ಖಾತೆಗಳ ವಿವರ ಮತ್ತು ಫೋಟೋಗಳನ್ನು ಪಡೆದುಕೊಂಡಿದ್ದಾರೆ.
ನಂತರ ಪ್ರಕರಣದಿಂದ ಪಾರಾಗಬೇಕಾದರೆ ನಿಮ್ಮ ಖಾತೆಯಲ್ಲಿರುವ ಹಣವನ್ನು ಪರಿಶೀಲನೆಗಾಗಿ ತಾವು ಸೂಚಿಸುವ ಖಾತೆಗೆ ವರ್ಗಾವಣೆ ಮಾಡಬೇಕು ಎಂದು ನಂಬಿಸಿದ್ದಾರೆ.
ಜುಲೈ 13ರಿಂದ 17ರವರೆಗೆ ನಿರಂತರ ವಾಟ್ಸಪ್ ಕರೆಗಳ ಮೂಲಕ ಮಾನಸಿಕ ಒತ್ತಡ ಹೇರಿ, ಒಟ್ಟು 65 ಲಕ್ಷ ರೂಪಾಯಿ ಹಣವನ್ನು ಆರೋಪಿಗಳು ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಈ ಸಂಬಂಧ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್, ಸಿಬಿಐ ಅಥವಾ ಯಾವುದೇ ಸರ್ಕಾರಿ ಅಧಿಕಾರಿಗಳು ತನಿಖೆಯ ಹೆಸರಿನಲ್ಲಿ ಹಣವನ್ನು ಬೇರೆ ಖಾತೆಗೆ ವರ್ಗಾಯಿಸಲು ಎಂದಿಗೂ ಸೂಚಿಸುವುದಿಲ್ಲ. ಇಂತಹ ಕರೆಗಳು ಬಂದರೆ ಎಚ್ಚರದಿಂದಿದ್ದು, ತಕ್ಷಣವೇ ಸಮೀಪದ ಪೊಲೀಸ್ ಠಾಣೆ ಅಥವಾ ಸೈಬರ್ ಸಹಾಯವಾಣಿ 1930ಕ್ಕೆ ಮಾಹಿತಿ ನೀಡಿ ಎಂದು ಪೊಲೀಸರು ತಿಳಿಸಿದ್ದಾರೆ.