ಡೈಲಿವಾರ್ತೆ: 19/ಜು./2026

ಉಡುಪಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಎಂಡಿಎಂಎ, ಹೈಡ್ರೋಗಾಂಜಾ ಸಹಿತ ಮೂವರ ಬಂಧನ

ಉಡುಪಿ: ಎಂಡಿಎಂಎ ಪೌಡರ್‌, ಹೈಡ್ರೋಗಾಂಜಾ ಹಾಗೂ ಎಂಡಿಎಂಎ ಟ್ಯಾಬ್ಲೆಟ್‌ಗಳನ್ನು ಕಾಪು, ಉಡುಪಿ, ಮಣಿಪಾಲ ಹಾಗೂ ಕಾರ್ಕಳ ಭಾಗಗಳಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

ಉಡುಪಿ ಉಪವಿಭಾಗದ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು. ಅವರ ಮಾರ್ಗದರ್ಶನದಲ್ಲಿ, ಮಲ್ಪೆ ಪೊಲೀಸ್‌ ನಿರೀಕ್ಷಕ ರಾಮಚಂದ್ರ ನಾಯಕ್ ಅವರ ನೇತೃತ್ವದಲ್ಲಿ ಹಾಗೂ ಉಡುಪಿ ಸಂಚಾರ ಠಾಣೆಯ ಪಿಎಸ್‌ಐ ಮಹೇಶ್ ಟಿ.ಎಂ. ಅವರೊಂದಿಗೆ ಶಿವಳ್ಳಿ ಗ್ರಾಮದ ಬುಡ್ನಾರ್‌ನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಯಿತು.

ಬಂಧಿತರನ್ನು ವಿಜಯ ಪೂಜಾರಿ (36) ಪಿತ್ರೋಡಿ, ಉದ್ಯಾವರ, ಪಿ.ಎ. ಮೊಹಮ್ಮದ್ ಸಮ್ಮಾಸ್ (24) ಹಾರ್ಜಿಡ್ಡು, ಕುಕ್ಕಂದೂರು ಹಾಗೂ ಆಕಾಶ್ ಶೆಟ್ಟಿ (20) ಕುಂಟಿಬೈಲು, ಮಿಯಾರು, ಕಾರ್ಕಳ ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ 4 ಗ್ರಾಂ ಎಂಡಿಎಂಎ ಪೌಡರ್‌, 2.5 ಗ್ರಾಂ ಹೈಡ್ರೋಗಾಂಜಾ, 3.65 ಗ್ರಾಂ ಎಂಡಿಎಂಎ ಟ್ಯಾಬ್ಲೆಟ್‌, 3 ಗ್ರಾಂ ಗಾಂಜಾ, ಮಾದಕ ವಸ್ತು ಸಾಗಾಟಕ್ಕೆ ಬಳಸಿದ್ದ ಕಾರು ಸೇರಿದಂತೆ ಒಟ್ಟು ₹3,31,500 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 95/2026ರಡಿ ಎನ್‌ಡಿಪಿಎಸ್ ಕಾಯ್ದೆ 1985ರ ಕಲಂ 8(ಸಿ), 20(ಸಿ) ಹಾಗೂ 22(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
ಈ ಕಾರ್ಯಾಚರಣೆಯಲ್ಲಿ ಸೈಬರ್ ಅಪರಾಧ ಪೊಲೀಸ್ ಠಾಣೆ, ಹಿರಿಯಡ್ಕ ಪೊಲೀಸ್ ಠಾಣೆ, ಮಲ್ಪೆ ವೃತ್ತ ಕಚೇರಿ ಹಾಗೂ ಉಡುಪಿ ಸಂಚಾರ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡ ಭಾಗವಹಿಸಿತ್ತು.