ಡೈಲಿವಾರ್ತೆ: 19/ಜು./2026

ಪಾಂಡೇಶ್ವರದಲ್ಲಿ ಪಂಚವರ್ಣದ 310ನೇ ವಾರದ ಪರಿಸರಸ್ನೇಹಿ ಅಭಿಯಾನ: ಪರಿಸರ ಸಂರಕ್ಷಣೆ ದೇವರ ಪೂಜೆಗೆ ಸಮಾನ – ಡಾ. ವಿಜಯ ಮಂಜರ್

ಕೋಟ: ಸೇವೆಯಲ್ಲಿ ನಾನಾ ರೀತಿಯ ಸೇವಾ ಕಾರ್ಯಗಳಿವೆ ಅದರಲ್ಲಿ ಪ್ರಕೃತಿಯನ್ನು ಆರಾಧಿಸುವ ಪರಿಸರ ಸಂರಕ್ಷಿಸುವ    ಸೇವೆ ಭಗವಂತನಿಗೆ ಸಲ್ಲಿಸುವ ಪೂಜೆಯಷ್ಟೆ ಶ್ರೇಷ್ಠತೆಯನ್ನು ಪಡೆದುಕೊಂಡಿದೆ ಇದು ಪ್ರಸ್ತುತ ಪಂಚವರ್ಣ ಸಂಘಟನೆಗಳಿಂದಾಗುತ್ತಿರುವುದು ಶ್ಲಾಘನೀಯ ಎಂದು ಪಾಂಡೇಶ್ವರ ಯೋಗಗುರುಕುಲದ ಮುಖ್ಯಸ್ಥ ಡಾ.ವಿದ್ವಾನ್ ವಿಜಯ ಮಂಜರ್ ಹೇಳಿದರು.

ಭಾನುವಾರ ಪಾಂಡೇಶ್ವರ ಹಾಲು ಉತ್ಪಾದಕರ ಸಂಘದ ವಠಾರದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ 310ನೇ ಪರಿಸರಸ್ನೇಹಿ ಅಭಿಯಾನದ ಪ್ರಯುಕ್ತ ಗೀತಾನಂದ ಫೌಂಡೇಶನ್ ಮಣೂರು ಪೇತ್ರಿ ಅನ್ನಪೂರ್ಣ ನರ್ಸರಿ,ಬ್ರಹ್ಮಾವರ ಕಾರ್ಯನಿರತ ಪತ್ರಕರ್ತರ ಸಂಘ ಇವರ ಸಹಯೋಗದೊಂದಿಗೆ ಪಾಂಡೇಶ್ವರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಸಂಯೋಜನೆಯೊಂದಿಗೆ ನಡೆದ ಹಸಿರು ಹೆಜ್ಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಹಸಿರು ಉಳಿಸಿ ಬೆಳೆಸಿದರೆ ಮನುಕುಲ ಸಂಕಷ್ಟದಿಂದ ಪಾರಾಗಬಹುದು ಇಲ್ಲವಾದಲ್ಲಿ ಹಣ ಕೊಟ್ಟು ಆಕ್ಸಿಜನ್ ಕೊಳ್ಳುವ ಕಾಲ ದೂರಿಲ್ಲ    ಅದಕ್ಕಾಗಿ ಪ್ರತಿಯೊರ್ವರು ಗಿಡ ನೆಟ್ಟು ಪೋಷಿಸುವ ಕಾರ್ಯ ಆಗಲಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮನೆ ಮನೆಗೆ ಪಾರಿಜಾತ ಹಾಗೂ ಲಕ್ಷ್ಮಣ ಫಲ ಗಿಡಗಳನ್ನು ವಿತರಿಸಿ ನೆಡಲಾಯಿತು.
ಕಾರ್ಯಕ್ರಮದಲ್ಲಿ ಭಾಗಿಯಾದ ಮಕ್ಕಳಿಗೆ ಪರಿಸರ ಜಾಗೃತಿ ಪ್ರತಿಜ್ಞಾವಿಧಿಯನ್ನು ಪಂಚವರ್ಣದ ಸದಸ್ಯ ಮಹೇಶ್ ಬೆಳಗಾವಿ ಭೋದಿಸಿದರು.

ಅಧ್ಯಕ್ಷತೆಯನ್ನು ಪಂಚವರ್ಣ ಸಂಘಟನೆಯ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಪಾಂಡೇಶ್ವರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ವಲೇರಿಯನ್ ಡಿಸೋಜ ,ಸಂಘದ ಸಿಇಒ ಶ್ಯಾಮಲ ಪಾಂಡೇಶ್ವರ, ಪಂಚವರ್ಣ    ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು.