ಡೈಲಿವಾರ್ತೆ: 21/ಜು./2026

ಕಾಸರಕೋಡು: ಪರ್ಷಿಯನ್ ಮೀನುಗಾರಿಕಾ ಬೋಟ್ ಆಕಸ್ಮಿಕ ಬೆಂಕಿಗಾಹುತಿ – ₹30 ಲಕ್ಷಕ್ಕೂ ಅಧಿಕ ನಷ್ಟ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡಿನ ಡೊಂಕ ಬಂದರಿನಲ್ಲಿ ಲಂಗರು ಹಾಕಿದ್ದ ಪರ್ಷಿಯನ್ ಮೀನುಗಾರಿಕಾ ಬೋಟ್ ಒಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ದುರಂತ ಘಟನೆ ನಡೆದಿದೆ.

ಅಯೂಬ್ ಸಾಬ್ ಎಂಬುವರಿಗೆ ಸೇರಿದ ಈ ಬೋಟ್ ಬಂದರಿನಲ್ಲಿ ನಿಂತಿದ್ದ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಬೋಟ್‌ನಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲೇ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಜ್ವಾಲೆಯು ಇಡೀ ಬೋಟ್‌ಗೆ ವ್ಯಾಪಿಸಿದೆ.

ಕೂಡಲೇ ಜಾಗರೂಕರಾದ ಸ್ಥಳೀಯ ಮೀನುಗಾರರು ಹಾಗೂ ಸಾರ್ವಜನಿಕರು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಆದರೆ, ಬೆಂಕಿಯ ತೀವ್ರತೆಗೆ ಬೋಟ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಅದರಲ್ಲಿದ್ದ ಬೆಲೆಬಾಳುವ ಮೀನುಗಾರಿಕಾ ಬಲೆಗಳು, ಲಕ್ಷಾಂತರ ರೂಪಾಯಿ ಮೌಲ್ಯದ ಇಂಜಿನ್‌ಗಳು ಮತ್ತು ಉಪಕರಣಗಳು ಭಸ್ಮವಾಗಿವೆ.

ಈ ಘಟನೆಯಿಂದ ಅಂದಾಜು 30 ಲಕ್ಷ ರೂಪಾಯಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅಗ್ನಿ ಅವಘಡಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.