ಡೈಲಿವಾರ್ತೆ: 26/ಜು./2026

ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಮಂಡ್ಯ: ಇತ್ತೀಚೆಗಷ್ಟೇ ಕರ್ನಾಟಕ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಘೋಷಣೆಯೊಂದನ್ನು ಮಾಡಿದ್ದು, 2028ರ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಲ್ಲ ಎಂದು ಹೇಳುವ ಮೂಲಕ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ಮಂಡ್ಯ ಜಿಲ್ಲೆಯ ಕೆ‌.ಆರ್.ಪೇಟೆಯಲ್ಲಿ‌ ನಡೆದಿದ್ದ K.R.ಪೇಟೆ ಕೃಷ್ಣ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ಈ ರೀತಿ ಹೇಳಿಕೆ ನೀಡಿದ್ದಾರೆ. ಆದರೆ ಅದೇ ವೇಳೆ ನೀವಿನ್ನೂ 10 ವರ್ಷ ರಾಜಕೀಯದಲ್ಲಿ ಇರಬೇಕೆಂದು ಬೆಂಬಲಿಗರು ಒತ್ತಾಯಿಸಿರುವ ಘಟನೆಯೂ ನಡೆದಿದೆ.

ಚುನಾವಣಾ ರಾಜಕೀಯದ ನಿವೃತ್ತಿಯ ತೀರ್ಮಾನದ ಬಗ್ಗೆ ಸಿದ್ದರಾಮಯ್ಯನವರು ಆಡಿರುವ ಮಾತುಗಳನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ. ಅವರ ಈ ಮಾತಿಗೆ ಕಾರ್ಯಕ್ರಮದಲ್ಲಿ ನೆರೆದಿದ್ದ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ನೀವು ರಾಜಕೀಯದಲ್ಲಿ ಇರಬೇಕು ಎಂದು ಒತ್ತಾಯಿಸಿದರೂ ಸಿದ್ದರಾಮಯ್ಯನವರು ಮಾತ್ರ ತಮ್ಮ ಹೇಳಿಕೆಯನ್ನು ಪುನರುಚ್ಛರಿಸಿದ್ದಾರೆ.

ಸಿದ್ದರಾಮಯ್ಯ ಅವರು ಎರಡು ಅವಧಿಗಳಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ಒಟ್ಟು 8 ವರ್ಷಗಳಿಗೂ ಹೆಚ್ಚು ಕಾಲ ಅಧಿಕಾರ ನಡೆಸುವ ಮೂಲಕ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಎಂಬ ದಾಖಲೆಯನ್ನೂ ಬರೆದಿದ್ದಾರೆ. ಮೊದಲ ಅವಧಿಯಲ್ಲಿ 13 ಮೇ 2013 ರಿಂದ 15 ಮೇ 2018 ರವರೆಗೆ ಅವರು ಸಿಎಂ ಆಗಿ 5 ವರ್ಷಗಳ ಅಧಿಕಾರಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರೆ, ಎರಡನೇ ಅವಧಿಯಲ್ಲಿ 20 ಮೇ 2023 ರಿಂದ 3 ಜೂನ್ 2026 ರವರೆಗೆ ಕರ್ನಾಟಕದ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.

ಈ ಹಿಂದೆಯೂ ಇಂತಹುದ್ದೇ ಹೇಳಿಕೆ ನೀಡಿದ್ದ ಸಿದ್ದರಾಮಯ್ಯ
2013ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗುವ ಸಂದರ್ಭದಲ್ಲಿ, ಇದು ತಮ್ಮ ಕೊನೆಯ ಚುನಾವಣೆ ಎಂದು ಮಾಧ್ಯಮಗಳ ಮುಂದೆ ಸಿದ್ದರಾಮಯ್ಯ ಹೇಳಿದ್ದರು. ಆ ಬಳಿಕ 2018ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಮತ್ತು ಬಾದಾಮಿ ಕ್ಷೇತ್ರಗಳಿಂದ ಸ್ಪರ್ಧಿಸುವ ಮುನ್ನ, 2018ರ ಚುನಾವಣೆಯು ಬಹುಪಾಲು ತಮ್ಮ ಕೊನೆಯ ಚುನಾವಣೆಯಾಗಲಿದೆ ಎಂದು ಪುನರುಚ್ಚರಿಸಿದ್ದರು. 2024ರ ಏಪ್ರಿಲ್‌ನಲ್ಲಿ ಮೈಸೂರಿನಲ್ಲಿ ಮಾತನಾಡುವ ಸಂದರ್ಭದಲ್ಲಿಯೂ ತನಗೆ ಈಗ 77 ವರ್ಷ. ಈ ಅವಧಿ ಮುಗಿಯುವಾಗ 81-82 ವರ್ಷ ದಾಟಿರುತ್ತದೆ. ಆ ಸಂದರ್ಭದಲ್ಲಿ ಉತ್ಸಾಹದಿಂದ ಕೆಲಸ ಮಾಡಲು ಆರೋಗ್ಯ ಸಹಕರಿಸುವುದಿಲ್ಲ. ಹಾಗಾಗಿ 2028ರ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದಿದ್ದರು.