ಡೈಲಿವಾರ್ತೆ: 27/ಜು./2026

ಕೋಟ ಬ್ಲಾಕ್ ಕಾಂಗ್ರೆಸ್‌ ನೂತನ ಅಧ್ಯಕ್ಷರಾಗಿ ಜಿ. ತಿಮ್ಮ ಪೂಜಾರಿ ಅಧಿಕಾರ ಸ್ವೀಕಾರ: ಈಶ್ವರನಿಂದ ವಿಷ್ಣುವಿನ ಕೈಗೆ ಅಧಿಕಾರ ಹಸ್ತಾಂತರ – ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ

ಕೋಟ: ಸುದೀರ್ಘ 17 ವರ್ಷಗಳ ಕಾಲ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಅಪಾರ ಶ್ರಮ ವಹಿಸಿದ ನಿರ್ಗಮಿತ ಅಧ್ಯಕ್ಷ ಶಂಕರ್ ಕುಂದರ್ ಅವರ ಸೇವೆಯನ್ನು ಸ್ಮರಿಸಿದ ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನ ಹೊಣೆಗಾರಿಕೆ ಸುಲಭವಲ್ಲ. ಈಶ್ವರನಂತಿದ್ದ ಶಂಕರ್ ಕುಂದರ್ ಅವರ ಸೇವೆಯ ನಂತರ ಈಗ ವಿಷ್ಣುವಿನಂತಿರುವ ತಿಮ್ಮ ಪೂಜಾರಿಯವರ ಕೈಗೆ ಬ್ಲಾಕ್ ಅಧ್ಯಕ್ಷತೆಯ ಹೊಣೆಗಾರಿಕೆ ಹಸ್ತಾಂತರವಾಗಿದೆ ಎಂದು ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ ಹೇಳಿದರು.
ಜುಲೈ 26 ರಂದು ಭಾನುವಾರ ಸಾಲಿಗ್ರಾಮದ ಚೇಂಪಿಯಲ್ಲಿರುವ ವಿಶ್ವಕರ್ಮ ಸಭಾಭವನದಲ್ಲಿ ಜರಗಿದ ಕೋಟ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಜಿ. ತಿಮ್ಮ ಪೂಜಾರಿ ಅವರ ಪದಪ್ರದಾನ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು ರಾಜಕೀಯದಲ್ಲಿ ಸಹಕಾರ ಇರಬೇಕು, ಸಹಕಾರದಲ್ಲಿ ರಾಜಕೀಯ ಇರಬಾರದು ಎನ್ನುವ ತತ್ವವನ್ನು ನಂಬಿ ಸಹಕಾರ ಕ್ಷೇತ್ರದಲ್ಲಿ ಬಿಜೆಪಿಯನ್ನು ಯಶಸ್ವಿಯಾಗಿ ಎದುರಿಸಿರುವ ತಿಮ್ಮ ಪೂಜಾರಿ ಅವರ ಅನುಭವ ಹಾಗೂ ಸಂಘಟನಾ ಶಕ್ತಿಯಿಂದ ಪಕ್ಷಕ್ಕೆ ಮತ್ತಷ್ಟು ಬಲ ಸಿಗಲಿದೆ ಎಂದರು.
ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ನೀತಿಗಳ ಕುರಿತು ಕಟುವಾಗಿ ವಾಗ್ದಾಳಿ ನಡೆಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಕಾರ್ಯವೈಖರಿಯನ್ನು ವಿಮರ್ಶಿಸುವುದು ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷದ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದ ಅವರು ಸಾರ್ವಜನಿಕ ನೀತಿಗಳು ಮತ್ತು ಆಡಳಿತವನ್ನು ಪ್ರಶ್ನಿಸುವುದು ನಮ್ಮ ಜನತಾಂತಿಕ ಹಕ್ಕು ಎಂದರು.
ಕೇಂದ್ರ ಸರ್ಕಾರದ ‘ಆತ್ಮನಿರ್ಭರ ಭಾರತ’ ಮುಂತಾದ ಯೋಜನೆಗಳ ಹೆಸರುಗಳು ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಆದರೆ ಕಾಂಗ್ರೆಸ್ ಸರ್ಕಾರದ ಯೋಜನೆಗಳು ಸರಳವಾಗಿದ್ದು, ಎಲ್ಲರಿಗೂ ಸುಲಭವಾಗಿ ತಲುಪುವಂತಿದ್ದವು ಎಂದು ಟೀಕಿಸಿದರು.
ಕಾಂಗ್ರೆಸ್ ಎಂದಿಗೂ ಶ್ರೀರಾಮನ ಸಾಂಸ್ಕೃತಿಕ ಹಾಗೂ ಪೌರಾಣಿಕ ಅಸ್ತಿತ್ವವನ್ನು ಪ್ರಶ್ನಿಸಿಲ್ಲ. ರಾಮನಾಮ ಮತ್ತು ‘ರಘುಪತಿ ರಾಘವ ರಾಜಾರಾಮ್’ ಭಾವೈಕ್ಯತೆಯ ಧ್ವನಿಯಾಗಿ ಗಾಂಧೀಜಿಯವರ ಕಾಲದಿಂದಲೂ ನಮ್ಮಲ್ಲಿದೆ. ರಾಮ ಭಕ್ತಿಯು ಪ್ರತಿಯೊಬ್ಬರ ವೈಯಕ್ತಿಕ ನಂಬಿಕೆ. ದೇವರನ್ನು ಚುನಾವಣಾ ರಾಜಕೀಯಕ್ಕಾಗಿ ದಾರಿಯಲ್ಲಿ ತಂದು ನಿಲ್ಲಿಸುವುದು ಸರಿಯಲ್ಲ ಎಂದು ಪ್ರತಿಪಾದಿಸಿದರು.
1989ರ ಹಿಮಾಚಲ ಪ್ರದೇಶದ ಕಾರ್ಯಕಾರಿಣಿ ಬಳಿಕ ಬಿಜೆಪಿ ಪಕ್ಷವು ಚುನಾವಣಾ ಲಾಭಕ್ಕಾಗಿ ರಾಮ ಜನ್ಮಭೂಮಿ ವಿಚಾರವನ್ನು ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿತು ಎಂದು ಆರೋಪಿಸಿದ ಅವರು, ನ್ಯಾಯಾಲಯದ ತೀರ್ಪಿಗೆ ಗೌರವ ನೀಡುವುದು ಕಾಂಗ್ರೆಸ್‌ನ ನಿಲುವಾಗಿತ್ತು ಎಂದರು.
ರಾಜ್ಯ ಸರ್ಕಾರದ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ ಹಾಗೂ ಶಕ್ತಿ ಯೋಜನೆಗಳು ನೇರವಾಗಿ ಪ್ರತಿಯೊಂದು ಮನೆಗೂ ತಲುಪುತ್ತಿವೆ. ಬಿಜೆಪಿ ಕಾರ್ಯಕರ್ತರ ಮನೆಗಳಿಗೂ ಈ ಯೋಜನೆಗಳ ಪ್ರಯೋಜನ ಸಿಗುತ್ತಿದೆ ಎಂದು ಹೇಳಿದರು.
ಪ್ರಸ್ತುತ ‘Gen Z’ (ನವ ಪೀಳಿಗೆಯ) ಯುವಜನತೆ ಜಾತಿ, ಮತ, ಧರ್ಮಗಳ ಹಂಗು ತೊರೆದು ದೇಶದ ಭವಿಷ್ಯ ಹಾಗೂ ಹಕ್ಕುಗಳಿಗಾಗಿ ಒಗ್ಗೂಡಿ ಹೋರಾಡುತ್ತಿದ್ದಾರೆ. ಯುವಜನತೆ ಮತ್ತು ಕಾರ್ಯಕರ್ತರು ಗ್ರಾಮ ಮಟ್ಟದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಿ, ಮುಂದಿನ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಸಂಘಟಿತವಾಗಿ ಬೆಳೆಸಬೇಕು ಎಂದು ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ ಕರೆ ನೀಡಿದರು.

ಜನರ ಸಮಸ್ಯೆಗೆ ಸ್ಪಂದಿಸಿದಾಗ ಮಾತ್ರ ಪಕ್ಷ ಬಲಗೊಳ್ಳುತ್ತದೆ: ಕೆ. ಜಯಪ್ರಕಾಶ್ ಹೆಗ್ಡೆ

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವರಾದ ಕೆ. ಜಯಪ್ರಕಾಶ್ ಹೆಗ್ಡೆ, ಕಾಂಗ್ರೆಸ್ ಪಕ್ಷದ ಸಂಘಟನೆ ಬರೀ ಕಟ್ಟಡಗಳಿಂದಲ್ಲ, ಕಾರ್ಯಕರ್ತರು ಹಾಗೂ ಜನರ ವಿಶ್ವಾಸದಿಂದ ಬಲಗೊಳ್ಳುತ್ತದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿದಾಗ ಮಾತ್ರ ಪಕ್ಷ ಇನ್ನಷ್ಟು ಸದೃಢವಾಗುತ್ತದೆ ಎಂದರು.
ಸಹಕಾರಿ ಕ್ಷೇತ್ರದಲ್ಲಿ ಅನುಭವ ಹೊಂದಿರುವ ನೂತನ ಅಧ್ಯಕ್ಷರು ತಮ್ಮ ಸಂಘಟನಾ ಶಕ್ತಿಯನ್ನು ಪಕ್ಷದ ಬೆಳವಣಿಗೆಗೆ ಬಳಸಿಕೊಳ್ಳಬೇಕು. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಇಂದಿನವರೆಗೂ ಯುವಜನರ ಹಾಗೂ ವಿದ್ಯಾರ್ಥಿಗಳ ಧ್ವನಿ ಪ್ರಮುಖವಾದದ್ದು. ಸಮಾಜದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ಪ್ರತಿಯೊಬ್ಬರೂ ಒಗ್ಗೂಡಿ ಧ್ವನಿ ಎತ್ತಬೇಕಿದೆ. ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳು ಹಾಗೂ ಸಾಧನೆಗಳನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸಬೇಕು ಎಂದು ಕರೆ ನೀಡಿದರು.

ಯುವ ಸಮುದಾಯದಿಂದ ಹೊಸ ರಾಜಕೀಯ ಅಧ್ಯಾಯ: ವಿನಯ್ ಕುಮಾರ್ ಸೊರಕೆ

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ ದೇಶದಲ್ಲಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಜನತೆ ರಾಜಕೀಯವಾಗಿ ಜಾಗೃತರಾಗಿದ್ದು, ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮೂಲಕ ಹೊಸ ರಾಜಕೀಯ ಅಧ್ಯಾಯಕ್ಕೆ ನಾಂದಿ ಹಾಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೋರಾಟ ನಡೆಯುತ್ತಿದೆ ಎಂದರು. ನಿರ್ಗಮಿತ ಅಧ್ಯಕ್ಷ ಶಂಕರ್ ಕುಂದರ್ ಅವರ ಸುದೀರ್ಘ ಸೇವೆಯನ್ನು ಅವರು ಶ್ಲಾಘಿಸಿದರು.

ಸಂವಿಧಾನ ರಕ್ಷಣೆಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು: ಐವನ್ ಡಿಸೋಜ

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ ಕೋಟ ಬ್ಲಾಕ್‌ನಲ್ಲಿ ಅತ್ಯಂತ ಸೌಹಾರ್ದಯುತವಾಗಿ ಅಧಿಕಾರ ಹಸ್ತಾಂತರಗೊಂಡಿರುವುದು ಶ್ಲಾಘನೀಯ. NEET ಪರೀಕ್ಷೆಯ ಅಕ್ರಮಗಳಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗಿದೆ. ಕೇಂದ್ರ ಸರ್ಕಾರ ವಿಪಕ್ಷಗಳ ಧ್ವನಿಯನ್ನು ಅಡಗಿಸುವ ಯತ್ನ ಮಾಡುತ್ತಿದೆ. ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಮಾಧ್ಯಮ ಸ್ವಾತಂತ್ರ್ಯ ಉಳಿಯಬೇಕಾದರೆ ಕಾಂಗ್ರೆಸ್ ಬಲಗೊಳ್ಳುವುದು ಅತ್ಯಗತ್ಯ ಎಂದರು.

ಗ್ರಾಮ ಮಟ್ಟದಿಂದ ಸಂಘಟನೆ ಬಲಪಡಿಸೋಣ: ಜಿ. ತಿಮ್ಮ ಪೂಜಾರಿ

ನೂತನ ಅಧ್ಯಕ್ಷ ಸ್ಥಾನ ಸ್ವೀಕರಿಸಿ ಮಾತನಾಡಿದ ಜಿ. ತಿಮ್ಮ ಪೂಜಾರಿ ಕಾರ್ಯಕರ್ತರೇ ಕಾಂಗ್ರೆಸ್ ಪಕ್ಷದ ಜೀವಾಳ. ಪ್ರತಿಯೊಬ್ಬ ಕಾರ್ಯಕರ್ತನ ಜೊತೆ ನಿಂತು ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಮೊದಲ ಆದ್ಯತೆ. ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಕೋಟ ಬ್ಲಾಕ್ ವ್ಯಾಪ್ತಿಯ 31 ಗ್ರಾಮಗಳಲ್ಲಿಯೂ ಸಂಘಟನೆಯನ್ನು ಬಲಪಡಿಸಲಾಗುವುದು. ಮುಂಬರುವ ಸ್ಥಳೀಯ ಸಂಸ್ಥೆಗಳ ಹಾಗೂ 2028ರ ಚುನಾವಣೆಯನ್ನು ಗುರಿಯಾಗಿಸಿಕೊಂಡು ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಬ್ಲಾಕ್ ಕಾಂಗ್ರೆಸ್ ಕಚೇರಿ ಸದಾ ಸಾರ್ವಜನಿಕರ ಸೇವೆಗೆ ತೆರೆದಿರುತ್ತದೆ ಎಂದು ಹೇಳಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷ ಶಂಕರ್ ಕುಂದರ್ ಅವರು ನೂತನ ಅಧ್ಯಕ್ಷ ಜಿ. ತಿಮ್ಮ ಪೂಜಾರಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಇದೇ ವೇಳೆ ಕೋಟ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಗೋಪಾಲ ಬಂಗೇರ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು.
ಸಮಾರಂಭದಲ್ಲಿ ಎಐಸಿಸಿ ವಕ್ತಾರ ಹಿಮ್ಮತ್ ಸಿಂಗ್ ಪಟೇಲ್, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೊಳ್ಕಬೈಲು ಕಿಶನ್ ಹೆಗ್ಡೆ, ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ರಾಜು ಪೂಜಾರಿ, ಮಲ್ಯಾಡಿ ಶಿವರಾಮ ಶೆಟ್ಟಿ, ರಮೇಶ್ ಕಾಂಚನ್, ಮಂಜುನಾಥ ಪೂಜಾರಿ, ಶ್ರೀಮತಿ ರೇಖಾ ಪಿ. ಸುವರ್ಣ, ಶ್ರೀಮತಿ ಜ್ಯೋತಿ ಹೆಬ್ಬಾರ್, ರಾಘವೇಂದ್ರ ಶೆಟ್ಟಿ ಕರ್ಜೆ, ಕೆದೂರು ಸದಾನಂದ ಶೆಟ್ಟಿ, ಪ್ರಸಾದ್ ರಾಜ್ ಕಾಂಚನ್, ಚಂದ್ರಶೇಖರ ಮೆಂಡನ್, ಪ್ರಖ್ಯಾತ್ ಶೆಟ್ಟಿ, ಭುಜಂಗ ಶೆಟ್ಟಿ, ಶ್ರೀನಿವಾಸ ಅಮೀನ್, ಮಮತಾ ಶೆಟ್ಟಿ, ಹಾವಂಜೆ ರಮೇಶ್ ಶೆಟ್ಟಿ, ಜಯಕುಮಾರ್, ಚಂದ್ರಶೇಖರ ಶೆಟ್ಟಿ, ನಿರೀಕ್ಷಾ ಮೆಂಡನ್, ಕಾವಡಿ ಉದಯಚಂದ್ರ ಶೆಟ್ಟಿ, ರೋಷನ್ ಕುಮಾರ್ ಶೆಟ್ಟಿ, ವಿಕಾಸ ಹೆಗ್ಡೆ, ಇಚ್ಚಿತಾರ್ಥ ಶೆಟ್ಟಿ ಹಾಗೂ ರಂಜಿತ್ ಕುಮಾರ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ನಿರ್ಗಮಿತ ಅಧ್ಯಕ್ಷ ಶಂಕರ್ ಕುಂದರ್ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಗೋಪಾಲ ಬಂಗೇರ ವಂದಿಸಿದರು.
ಡಾ. ಸುನಿತಾ ಶೆಟ್ಟಿ ಹಾಗೂ ಪಟ್ಟಣ ಪಂಚಾಯತ್ ಮಾಜಿ ಸದಸ್ಯ ವಿನಯ್ ಕುಮಾರ್ ಕಬ್ಯಾಡಿ ಕಾರ್ಯಕ್ರಮ ನಿರೂಪಿಸಿದರು.