ಡೈಲಿವಾರ್ತೆ: 27/ಜು./2026

ಲಕ್ಷ್ಮೇಶ್ವರ ನೌಕರರ ಸಂಘದ ನಿವೇಶನ ಪರಿಶೀಲನೆ: ಒಂದು ವರ್ಷದಲ್ಲಿ ನೌಕರರ ಭವನ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ: ಡಾ. ಬಸವರಾಜ ಬಳ್ಳಾರಿ ಭರವಸೆ

ಲಕ್ಷ್ಮೇಶ್ವರ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರು ಹಾಗೂ ಗದಗ ಜಿಲ್ಲಾ ಅಧ್ಯಕ್ಷರಾದ ಡಾ. ಬಸವರಾಜ ಬಳ್ಳಾರಿ ಅವರು ಲಕ್ಷ್ಮೇಶ್ವರ ಘಟಕದ ನೌಕರರ ಸಂಘದ ನಿವೇಶನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ, ಒಂದು ವರ್ಷದೊಳಗೆ ನೌಕರರ ಭವನ ನಿರ್ಮಾಣ ಕಾರ್ಯಕ್ಕೆ ಅಗತ್ಯವಿರುವ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ನಿವೇಶನ ವೀಕ್ಷಿಸಿದ ಬಳಿಕ ಮಾತನಾಡಿದ ಡಾ. ಬಸವರಾಜ ಬಳ್ಳಾರಿ, ನೌಕರರ ಸಂಘದ ಸ್ವಂತ ಭವನ ನಿರ್ಮಾಣವು ಸಂಘದ ಬಲವರ್ಧನೆಗೆ ಮಹತ್ವದ ಹೆಜ್ಜೆಯಾಗಿದ್ದು, ಈ ಮಹತ್ವಾಕಾಂಕ್ಷಿ ಯೋಜನೆ ಯಶಸ್ವಿಯಾಗಲು ತಮ್ಮಿಂದ ಸಾಧ್ಯವಿರುವ ಎಲ್ಲ ರೀತಿಯ ನೆರವು ಹಾಗೂ ಮಾರ್ಗದರ್ಶನ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಭವನ ನಿರ್ಮಾಣಕ್ಕಾಗಿ ನಿವೇಶನ ದಾನ ಮಾಡಿದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದ ಅವರು, ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಕ್ರಿಯಾಶೀಲ ಕಾರ್ಯವೈಖರಿ, ಸಂಘಟನಾ ಚಟುವಟಿಕೆಗಳು ಮತ್ತು ನೌಕರರ ಹಿತಾಸಕ್ತಿಗಾಗಿ ನಡೆಸುತ್ತಿರುವ ಸೇವೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಲಕ್ಷ್ಮೇಶ್ವರ ಘಟಕದ ಕಾರ್ಯದರ್ಶಿ ಎಂ.ಎ. ನದಾಫ್, ನಿಕಟಪೂರ್ವ ಅಧ್ಯಕ್ಷ ಡಿ.ಎಚ್. ಪಾಟೀಲ್, ಜಿಲ್ಲಾ ನೌಕರರ ಸಂಘದ ಸದಸ್ಯೆ ಶ್ರೀಮತಿ ಎಲ್.ಎನ್. ನಂದೆಣ್ಣವರ, ಎಂ.ಎಸ್. ಹಿರೇಮಠ, ಚಂದ್ರು ನೇಕಾರ, ಬಸವರಾಜ ಯತ್ನಳ್ಳಿ, ಶಿವಾನಂದ ಅಸುಂಡಿ, ಡಿ.ಜಿ. ಸಂಗಮ್ಮನವರ, ಸೈನಿಕರಾದ ಸಂಜೀವಪ್ಪನವರ, ಎಸ್.ಬಿ. ಸೇರಿದಂತೆ ಲಕ್ಷ್ಮೇಶ್ವರ ಘಟಕದ ಪದಾಧಿಕಾರಿಗಳು, ಸದಸ್ಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.