


ಡೈಲಿವಾರ್ತೆ:23/ಆಗಸ್ಟ್ /2026

ದರ್ಬೆ ಗಲಾಟೆಗೆ ಕೋಮು ಬಣ್ಣ: ಸಾಕ್ಷ್ಯಾಧಾರಗಳ ಆಧಾರದಲ್ಲೇ ಕಾನೂನು ಕ್ರಮ – ಎಸ್ಪಿ ಡಾ. ಅರುಣ್ ಕೆ.

ಪುತ್ತೂರು: ದರ್ಭೆಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಕೋಮು ಬಣ್ಣ ನೀಡುವ ಪ್ರಯತ್ನಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಪ್ರಕರಣದ ತನಿಖೆಯನ್ನು ಸಂಪೂರ್ಣವಾಗಿ ಸಾಕ್ಷ್ಯಾಧಾರಗಳು ಹಾಗೂ ಕಾನೂನು ಪ್ರಕಾರ ಪಾರದರ್ಶಕವಾಗಿ ನಡೆಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವದಂತಿ ಹಾಗೂ ಪ್ರಚೋದನಕಾರಿ ಹೇಳಿಕೆಗಳಿಗೆ ಕಿವಿಗೊಡದೆ ಶಾಂತಿ ಕಾಪಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ದರ್ಭೆಯ ಅಂಗಡಿಯೊಂದರಲ್ಲಿ ಲ್ಯಾಮಿನೇಷನ್ ಯಂತ್ರದಲ್ಲಾದ ತಾಂತ್ರಿಕ ದೋಷದಿಂದ ದಾಖಲೆಯೊಂದು ಹಾನಿಗೊಳಗಾದ ಬಳಿಕ ವಿವಾದ ಉಂಟಾಗಿತ್ತು. ಆರಂಭದಲ್ಲಿಯೇ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬಹುದಾಗಿತ್ತು. ಅಗತ್ಯವಿದ್ದಲ್ಲಿ ಪೊಲೀಸ್ ಠಾಣೆ ಅಥವಾ ಸೂಕ್ತ ಕಾನೂನು ಹಾಗೂ ಗ್ರಾಹಕ ವೇದಿಕೆಯನ್ನು ಸಂಪರ್ಕಿಸುವುದು ಸೂಕ್ತ ಕ್ರಮವಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ವೇಳೆ ಗ್ರಾಹಕರು ಅಂಗಡಿಯ ಕೆಲಸಗಾರನೊಂದಿಗೆ ಆಕ್ರೋಶದಿಂದ ವರ್ತಿಸಿರುವುದು ಹಾಗೂ ಅಂಗಡಿ ಮಾಲೀಕರಾದ ಅಂಜನಾ ಪೈ ಅವರು ಗಲಾಟೆಯಲ್ಲಿ ಭಾಗಿಯಾಗಿರುವ ಕುರಿತು ತನಿಖೆ ನಡೆಯುತ್ತಿದೆ. ಇದೇ ವೇಳೆ ಸುದರ್ಶನ್ ಪೈ ಎಂಬಾತ ಮಧ್ಯಪ್ರವೇಶಿಸಿ ಘಟನೆಯನ್ನು ಚಿತ್ರೀಕರಿಸಲು ಯತ್ನಿಸುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲಭ್ಯವಿರುವ ವೀಡಿಯೊ ದೃಶ್ಯಾವಳಿಗಳು ತನಿಖೆಯಲ್ಲಿ ಪ್ರಮುಖ ಸಾಕ್ಷ್ಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಸುದರ್ಶನ್ ಪೈ ಅವರನ್ನು ಪೊಲೀಸರು ವಶಕ್ಕೆ ಪಡೆದ ಬಳಿಕವೂ ಕೆಲವರು ಅತಿರೇಕದ ವರ್ತನೆ ತೋರಿರುವುದು ಗಮನಕ್ಕೆ ಬಂದಿದೆ. ಈ ಪೈಕಿ ನೌಶಾದ್ ಎಂಬಾತ ಪೊಲೀಸ್ ವಾಹನದೊಳಗೆ ಇಣುಕಿ ಕೃತ್ಯವೆಸಗಿರುವುದು ಕಂಡುಬಂದಿದ್ದು, ವಾಹನದಲ್ಲಿದ್ದ ಸುದರ್ಶನ್ ಪೈ ಅವರ ತಂದೆಯ ವಿಚಾರಣೆ ಸೇರಿದಂತೆ ಲಭ್ಯವಿರುವ ಎಲ್ಲ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಸುದರ್ಶನ್ ಪೈ ವಿರುದ್ಧ ಕೊಲೆ ಯತ್ನ ಹಾಗೂ ಮಾದಕವಸ್ತು ದಂಧೆಗೆ ಸಂಬಂಧಿಸಿದ ಪ್ರಕರಣಗಳು ಸೇರಿದಂತೆ ಹಿಂದಿನ ಪ್ರಕರಣಗಳಿವೆ. ನೌಶಾದ್ ವಿರುದ್ಧ ರಸ್ತೆ ಜಗಳಕ್ಕೆ ಸಂಬಂಧಿಸಿದ ಹಲ್ಲೆ ಪ್ರಕರಣವಿದ್ದು, ಸದಾಶಿವ ಪೈ ವಿರುದ್ಧವೂ ರಸ್ತೆ ಜಗಳದ ಹಳೆಯ ಪ್ರಕರಣವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಲಾಟೆ ಸಂದರ್ಭದಲ್ಲಿ ಅಂಗಡಿಯ ಮುಂದೆ ಸೇರಿದ್ದ ಇತರ ಇಬ್ಬರ ಮೇಲೆಯೂ ತಲಾ ಒಂದೊಂದು ಹಳೆಯ ಪ್ರಕರಣಗಳಿವೆ ಎಂದು ಪೊಲೀಸ್ ಇಲಾಖೆ ಹೇಳಿದೆ.
ನೌಶಾದ್, ನಿಯಾಜ್, ಅಂಜನಾ ಪೈ, ಸದಾಶಿವ ಪೈ ಸೇರಿದಂತೆ ಇತರರನ್ನು ಬಂಧಿಸುವಂತೆ ಒತ್ತಾಯಿಸಲಾಗುತ್ತಿರುವ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, ಯಾವುದೇ ವ್ಯಕ್ತಿ ಅಪರಾಧ ಎಸಗಿರುವುದು ದೃಢಪಟ್ಟರೆ ಆತನ ಧರ್ಮ, ಸಮುದಾಯ ಅಥವಾ ಸಾಮಾಜಿಕ ಗುರುತನ್ನು ಪರಿಗಣಿಸದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಬಂಧನ ಸೇರಿದಂತೆ ಯಾವುದೇ ಕಾನೂನು ಕ್ರಮವು ಘಟನೆಯ ಸತ್ಯಾಸತ್ಯತೆ, ಲಭ್ಯವಿರುವ ಸಾಕ್ಷ್ಯಾಧಾರಗಳು ಹಾಗೂ ಕಾನೂನುಬದ್ಧ ಅಗತ್ಯತೆಗಳ ಆಧಾರದ ಮೇಲೆಯೇ ನಡೆಯಲಿದೆ. ಸಾರ್ವಜನಿಕ ಅಥವಾ ಕೋಮು ಒತ್ತಡಕ್ಕೆ ಮಣಿದು ಯಾರನ್ನೂ ಬಂಧಿಸಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ತನಿಖೆ ಕುರಿತು ಯಾರಿಗಾದರೂ ಸಂದೇಹಗಳಿದ್ದರೆ, ತಮ್ಮಲ್ಲಿರುವ ಸತ್ಯಾಂಶ ಹಾಗೂ ಸಾಕ್ಷ್ಯಾಧಾರಗಳೊಂದಿಗೆ ಪೊಲೀಸರನ್ನು ಸಂಪರ್ಕಿಸಿ ಚರ್ಚಿಸಲು ಅವಕಾಶವಿದೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಸತ್ಯಾಂಶ ಹಾಗೂ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಲು ಪೊಲೀಸ್ ಇಲಾಖೆ ಸಿದ್ಧವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಘಟನೆಯನ್ನು ಕೋಮು ವೈಷಮ್ಯದ ದೃಷ್ಟಿಕೋನದಲ್ಲಿ ಬಿಂಬಿಸಿ ಸಮುದಾಯಗಳ ನಡುವೆ ದ್ವೇಷ ಸೃಷ್ಟಿಸಲು ಕೆಲವರು ಪ್ರಯತ್ನಿಸುತ್ತಿರುವಂತೆ ಕಂಡುಬರುತ್ತಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಪ್ರಚೋದನಕಾರಿ ಹಾಗೂ ದಾರಿತಪ್ಪಿಸುವ ಹೇಳಿಕೆಗಳನ್ನು ಪರಿಶೀಲಿಸದೆ ನಂಬಬಾರದು ಎಂದು ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಇಂದು ಪುತ್ತೂರಿನಲ್ಲಿ ಶಾಂತಿ ಸಭೆ:
ಜಿಲ್ಲೆಯಲ್ಲಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಆಗಸ್ಟ್ 23ರಂದು ಸಂಜೆ 5 ಗಂಟೆಗೆ ಪುತ್ತೂರು ಪೊಲೀಸ್ ಉಪಾಧೀಕ್ಷಕರ ಕಚೇರಿಯಲ್ಲಿ ಶಾಂತಿ ಸಭೆ ಆಯೋಜಿಸಲಾಗಿದೆ. ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿ ತಮ್ಮ ವಿನಂತಿ ಹಾಗೂ ಕಳವಳಗಳನ್ನು ಶಾಂತಿಯುತ ಮತ್ತು ರಚನಾತ್ಮಕ ರೀತಿಯಲ್ಲಿ ವ್ಯಕ್ತಪಡಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.