ಡೈಲಿವಾರ್ತೆ:14/ಸೆ./2026

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧಮ್ಕಿ ವಿವಾದ: ಅಮಾನತಿಗೆ ಬಿಜೆಪಿ ಪಟ್ಟು – ಎಸ್ಪಿ ವರದಿ ಬಳಿಕ ಕ್ರಮ ಎಂದ ಖರ್ಗೆ

ಬೆಂಗಳೂರು, ಸೆ.14: ಟಿ. ನರಸೀಪುರದಲ್ಲಿ ಗಣೇಶ ಮೆರವಣಿಗೆ ವೇಳೆ ಮಸೀದಿ ಮುಂದೆ ಪಟಾಕಿ ಸಿಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಧನಂಜಯ್‌ ನೀಡಿರುವ ಎನ್ನಲಾದ ‘ಗ್ರಹಚಾರ ಬಿಡಿಸ್ತೀನಿ’ ಧಮ್ಕಿ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ.
ಇನ್ಸ್‌ಪೆಕ್ಟರ್‌ ವಿರುದ್ಧ ಕ್ರಮ ಕೈಗೊಂಡು ಅವರನ್ನು ಅಮಾನತುಗೊಳಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ, ಬಿಜೆಪಿ ಒತ್ತಾಯದ ಆಧಾರದ ಮೇಲೆ ಅಮಾನತು ಸೇರಿದಂತೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ಸ್‌ಪೆಕ್ಟರ್‌ ವಿರುದ್ಧ ಕ್ರಮದ ಬಗ್ಗೆ ನೋಡೋಣ. ಬಿಜೆಪಿಯವರು ಹೇಳಿದಂತೆ ನಾವು ಆಡಳಿತ ನಡೆಸಲು ಸಾಧ್ಯವಿಲ್ಲ. ಎಸ್‌ಪಿ ವರದಿ ನೀಡಲಿ. ಆ ವರದಿಯನ್ನು ಪರಿಶೀಲಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಖರ್ಗೆ ಹೇಳಿದರು.

ಬಿಜೆಪಿ ಅಮಾನತು ಮಾಡಿ ಎಂದ ತಕ್ಷಣ ಅಮಾನತು ಮಾಡಬೇಕಾ?’ ಎಂದು ಪ್ರಶ್ನಿಸಿದ ಅವರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿದ್ದ ನಿಯಮಗಳೇ ಈಗಲೂ ಮುಂದುವರಿದಿವೆ ಎಂದು ಸಮರ್ಥಿಸಿಕೊಂಡರು.
ಮಾಜಿ ಗೃಹ ಸಚಿವ ಆರ್. ಅಶೋಕ್‌ ಅವರ ಅವಧಿಯಲ್ಲಿಯೂ ಇಂತಹ ಪ್ರಕರಣಗಳಲ್ಲಿ ಸಭೆ ನಡೆಸಿ ಸೂಚನೆಗಳನ್ನು ನೀಡಲಾಗುತ್ತಿರಲಿಲ್ಲವೇ ಎಂದು ಪ್ರಶ್ನಿಸಿದ ಖರ್ಗೆ, ಪೊಲೀಸ್‌ ಠಾಣೆಗೆ ನುಗ್ಗುವುದಾಗಿ ಹೇಳಿಕೆ ನೀಡುವ ರಾಜಕಾರಣಿಗಳ ನಡೆ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದರು.

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಈ ವಿಚಾರದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಮತ್ತೊಂದೆಡೆ, ಗೃಹ ಸಚಿವರ ಹೇಳಿಕೆ ಪ್ರಕರಣಕ್ಕೆ ಮತ್ತಷ್ಟು ರಾಜಕೀಯ ತಿರುವು ನೀಡಿದೆ. ಇದೀಗ ಎಸ್‌ಪಿ ನೀಡಲಿರುವ ವರದಿ ಹಾಗೂ ಅದರ ಆಧಾರದ ಮೇಲೆ ಸರ್ಕಾರ ಕೈಗೊಳ್ಳುವ ಕ್ರಮದತ್ತ ಗಮನ ಹರಿದಿದೆ.