ಡೈಲಿವಾರ್ತೆ:14/ಸೆ./2026

ಮೈಸೂರಿನಲ್ಲಿ ಸ್ವಂತ ಸೂರು ಸೇರಿದ ಸಿದ್ದರಾಮಯ್ಯ ಕುಟುಂಬ: ಪತ್ನಿ ಪಾರ್ವತಿ ಅವರ ಬಹುದಿನಗಳ ಕನಸು ನನಸು – ಆಪ್ತರ ಸಮ್ಮುಖದಲ್ಲಿ ಸರಳ ಧಾರ್ಮಿಕ ಕಾರ್ಯಕ್ರಮ

ಮೈಸೂರು: ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯದ ಹಿರಿಯ ರಾಜಕಾರಣಿ ಸಿದ್ದರಾಮಯ್ಯ ಅವರ ಕುಟುಂಬ ಮೈಸೂರಿನಲ್ಲಿ ನೂತನ ಸ್ವಂತ ನಿವಾಸಕ್ಕೆ ಪ್ರವೇಶಿಸಿದೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸ್ವಂತ ಮನೆ ನಿರ್ಮಿಸಬೇಕೆಂಬ ಪತ್ನಿ ಪಾರ್ವತಿ ಅವರ ಬಹುದಿನಗಳ ಆಸೆಯಂತೆ ನಿರ್ಮಿಸಲಾಗಿರುವ ನೂತನ ನಿವಾಸದಲ್ಲಿ ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಗೃಹಪ್ರವೇಶ ನೆರವೇರಿತು.

ಮೈಸೂರಿನ ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿ 80×120 ಅಡಿ ಅಳತೆಯ ನಿವೇಶನದಲ್ಲಿ ಎರಡು ಅಂತಸ್ತಿನ ನೂತನ ಬಂಗಲೆ ನಿರ್ಮಿಸಲಾಗಿದೆ. ಯಾವುದೇ ಅಧಿಕೃತ ಪ್ರವಾಸ ಕಾರ್ಯಕ್ರಮವಿಲ್ಲದೆ ಮೈಸೂರಿಗೆ ಆಗಮಿಸಿದ್ದ ಸಿದ್ದರಾಮಯ್ಯ ಅವರು ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಕುಟುಂಬಸ್ಥರೊಂದಿಗೆ ಗೃಹಪ್ರವೇಶದ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿದರು.

ನಿನ್ನೆ ರಾತ್ರಿ ನೂತನ ನಿವಾಸದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದಿದ್ದು, ಇಂದು ಬೆಳಗ್ಗೆಯೂ ಸಾಂಪ್ರದಾಯಿಕ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು. ಬಳಿಕ ಕೇವಲ ಕುಟುಂಬಸ್ಥರು ಹಾಗೂ ಅತ್ಯಂತ ಆಪ್ತರ ಸಮ್ಮುಖದಲ್ಲಿ ಸರಳವಾಗಿ ಗೃಹಪ್ರವೇಶ ಕಾರ್ಯಕ್ರಮ ನಡೆಯಿತು.

ರಾಜ್ಯ ರಾಜಕಾರಣದಲ್ಲಿ ವಿರೋಧ ಪಕ್ಷದ ನಾಯಕರಾಗಿ ಹಾಗೂ ಎರಡು ಬಾರಿ ಮುಖ್ಯಮಂತ್ರಿಯಾಗಿ ಸುದೀರ್ಘ ಸೇವೆ ಸಲ್ಲಿಸಿರುವ ಸಿದ್ದರಾಮಯ್ಯ ಅವರಿಗೆ ಇಷ್ಟು ವರ್ಷಗಳ ಕಾಲ ಮೈಸೂರಿನಲ್ಲಿ ಸ್ವಂತ ಮನೆಯಿರಲಿಲ್ಲ. ಮೈಸೂರಿಗೆ ಆಗಮಿಸಿದ ಸಂದರ್ಭಗಳಲ್ಲಿ ಅವರು ತಮ್ಮ ಬಹುಕಾಲದ ಆಪ್ತ ಸ್ನೇಹಿತ ಮರಿಸ್ವಾಮಿ ಅವರ ಮನೆಯಲ್ಲಿ ವಾಸ್ತವ್ಯ ಹೂಡುತ್ತಿದ್ದರು.
ಇದೀಗ ಪತ್ನಿ ಪಾರ್ವತಿ ಅವರ ಬಹುದಿನಗಳ ಬಯಕೆಯಂತೆ ಮೈಸೂರಿನಲ್ಲೇ ಸ್ವಂತ ನಿವಾಸ ನಿರ್ಮಾಣವಾಗಿದ್ದು, ಸಿದ್ದರಾಮಯ್ಯ ಕುಟುಂಬ ನೂತನ ಗೃಹಕ್ಕೆ ಕಾಲಿಟ್ಟಿದೆ. ಮೈಸೂರಿನೊಂದಿಗಿನ ಸಿದ್ದರಾಮಯ್ಯ ಅವರ ದೀರ್ಘಕಾಲದ ನಂಟಿಗೆ ನೂತನ ನಿವಾಸ ಮತ್ತೊಂದು ಗುರುತಾಗಿ ಪರಿಣಮಿಸಿದೆ.