


ಡೈಲಿವಾರ್ತೆ:16/ಸೆ./2026

ಹಿಟ್&ರನ್: ಮದುವೆಯಾಗಿ ಒಂದೂವರೆ ತಿಂಗಳಲ್ಲೇ ನವದಂಪತಿ ಬಲಿ!

ತುಮಕೂರು: ಮದುವೆಯಾಗಿ ಕೇವಲ ಒಂದೂವರೆ ತಿಂಗಳಷ್ಟೇ ಕಳೆದಿದ್ದ ನವದಂಪತಿ ಅಪಘಾತವೊಂದರಲ್ಲಿ ದಾರುಣವಾಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರಾಳು ಸೇತುವೆ ಮೇಲೆ ನಡೆದಿದೆ.
ಮೃತರನ್ನು ಶಿರಾ ತಾಲೂಕಿನ ಹುಣಸೇಕಟ್ಟೆ ಗ್ರಾಮದ ದರ್ಶನ್ (25) ಹಾಗೂ ಉಷಾರಾಣಿ (21) ಎಂದು ಗುರುತಿಸಲಾಗಿದೆ. ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ದಂಪತಿ ಮಂಗಳವಾರ ಬೈಕ್‌ನಲ್ಲಿ ಬೆಂಗಳೂರಿನ ಮಾರ್ಗವಾಗಿ ತೆರಳುತ್ತಿದ್ದರು.
ರಾಷ್ಟ್ರೀಯ ಹೆದ್ದಾರಿ 48ರ ದ್ವಾರಾಳು ಸೇತುವೆ ಮೇಲೆ ತೆರಳುತ್ತಿದ್ದ ವೇಳೆ ಅಪರಿಚಿತ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ದಂಪತಿ ಗಂಭೀರವಾಗಿ ಗಾಯಗೊಂಡಿದ್ದು, ದರ್ಶನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಉಷಾರಾಣಿಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ.
ಘಟನೆ ಕುರಿತು ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ಕಾರಣವಾದ ಅಪರಿಚಿತ ವಾಹನ ಹಾಗೂ ಚಾಲಕನ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.