


ಡೈಲಿವಾರ್ತೆ:16/ಸೆ./2026

ಜೇಸಿಐ ಕುಂದಾಪುರ ಸಿಟಿ ವತಿಯಿಂದ ಜೇಸಿಐ ಸಪ್ತಾಹ-2026: ಯುವಜನರಿಗೆ ನಾಯಕತ್ವದ ಜತೆಗೆ ಸಮಾಜ ಸೇವೆಯ ತರಬೇತಿ ಅಗತ್ಯ: ಎಂ.ಎ. ಗಫೂರ್

ಕುಂದಾಪುರ: ಯುವಜನರನ್ನು ಸಂಘಟಿಸಿ, ನಾಯಕತ್ವ ಗುಣಗಳ ಜತೆಗೆ ಸಮಾಜಮುಖಿ ಚಿಂತನೆ ಬೆಳೆಸುವ ನಿಟ್ಟಿನಲ್ಲಿ ಜೇಸಿಐ ಸಂಸ್ಥೆ ಮಹತ್ವದ ಕಾರ್ಯ ನಿರ್ವಹಿಸುತ್ತಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು.

ಜೇಸಿಐ ಕುಂದಾಪುರ ಸಿಟಿ ವತಿಯಿಂದ ಆಯೋಜಿಸಿದ್ದ ಜೇಸಿಐ ಸಪ್ತಾಹ-2026ರ ಸಮಾರೋಪ ಸಮಾರಂಭವನ್ನು ಮಂಗಳವಾರ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಯುವಜನರನ್ನು ರಚನಾತ್ಮಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಉತ್ತಮ ನಾಗರಿಕರನ್ನಾಗಿ ರೂಪಿಸುವ ಅಗತ್ಯವಿದೆ. ಸಮಾಜದ ಧ್ವನಿ ಇಲ್ಲದವರು, ಶೋಷಿತರು ಹಾಗೂ ಹಿಂದುಳಿದವರನ್ನು ಮುಖ್ಯವಾಹಿನಿಗೆ ತರುವಲ್ಲಿ ಸರ್ಕಾರದ ಜತೆಗೆ ಸಾಮಾಜಿಕ ಸಂಘಟನೆಗಳೂ ಕೈಜೋಡಿಸಬೇಕು ಎಂದರು.
ಗಣೇಶೋತ್ಸವದಂತಹ ಆಚರಣೆಗಳು ಸಾಮಾಜಿಕ ಸಂಘಟನೆ ಹಾಗೂ ಜಾಗೃತಿಗೆ ವೇದಿಕೆಯಾಗಬೇಕು. ಸಂವಿಧಾನದ ಆಶಯಗಳನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ವಿವಿಧ ಭಾಷೆ, ಜಾತಿ ಹಾಗೂ ಸಮುದಾಯಗಳ ನಡುವೆ ವಿವಿಧತೆಯಲ್ಲಿ ಏಕತೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.
ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಜೇಸಿಐ ಕುಂದಾಪುರ ಸಿಟಿ ಸದಸ್ಯರು ಆಸ್ಪತ್ರೆಗೆ ಸಾಗಣೆ, ಆಹಾರ ವಿತರಣೆ ಹಾಗೂ ಅಗತ್ಯವಿರುವವರಿಗೆ ನೆರವು ಸೇರಿದಂತೆ ಹಲವು ಸೇವಾ ಕಾರ್ಯಗಳನ್ನು ಕೈಗೊಂಡಿರುವುದನ್ನು ಸ್ಮರಿಸಿದ ಅವರು, ಇಂತಹ ಸಮಾಜಮುಖಿ ಚಟುವಟಿಕೆಗಳು ನಿರಂತರವಾಗಿ ಮುಂದುವರಿಯಬೇಕು ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಕುಂದಾಪುರ ಸಿಟಿ ಅಧ್ಯಕ್ಷ ಕಿರಣ್ ದೇವಾಡಿಗ ವಹಿಸಿದ್ದರು.
ಸಾಧಕರಿಗೆ ಸನ್ಮಾನ:
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜೆಸಿ ಯೂಸಫ್ ಸಲೀಂ (ಕಮಲ ಪತ್ರ ಪ್ರಶಸ್ತಿ), ಅಬ್ದುಲ್ ಸಲಾಂ ಚಿತ್ತೂರು (ಶಿಕ್ಷಣ), ಐವನ್ ಅಲ್ಮೇಡಾ (ಸ್ವರ್ಣ ಪ್ರಶಸ್ತಿ), ಎಲ್.ಎನ್. ಹಂಸರಾಜ್ ಶೆಟ್ಟಿ (ಉದ್ಯಮ) ಹಾಗೂ ಜೆಸಿ ರವಿಕಿರಣ್ ಮುರುಡೇಶ್ವರ (ಸಮಾಜ ಸೇವೆ) ಅವರನ್ನು ಸನ್ಮಾನಿಸಲಾಯಿತು.






ಸನ್ಮಾನ ಸ್ವೀಕರಿಸಿ ಮಾತನಾಡಿದ ವಕೀಲ ಹಾಗೂ ಸಮಾಜ ಸೇವಕ ರವಿಕಿರಣ್ ಮುರುಡೇಶ್ವರ, ಜೇಸಿಐನ ಸದಸ್ಯರಾಗಿರುವುದಷ್ಟೇ ಸಾಕಾಗುವುದಿಲ್ಲ. ಸಂಸ್ಥೆಯ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಾಗ ನಾಯಕತ್ವ, ಅನುಭವ ಹಾಗೂ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ತಮ್ಮ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಜೇಸಿಐನ ತರಬೇತಿ ಹಾಗೂ ಅನುಭವಗಳು ಮಹತ್ವದ ಪಾತ್ರ ವಹಿಸಿವೆ ಎಂದು ಹೇಳಿದರು.

ಉದ್ಯಮ ಕ್ಷೇತ್ರದ ಪ್ರಶಸ್ತಿ ಸ್ವೀಕರಿಸಿದ ಲಯನ್ಸ್ ಕ್ಲಬ್ ಅಧ್ಯಕ್ಷ ಎಲ್.ಎನ್. ಹಂಸರಾಜ್ ಶೆಟ್ಟಿ, ಸಂಘ-ಸಂಸ್ಥೆಗಳು ಸಮಾಜ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಯುವಜನರ ಉತ್ಸಾಹ ಮತ್ತು ಕ್ರಿಯಾಶೀಲತೆಯಿಂದ ಸೇವಾ ಕಾರ್ಯಗಳಿಗೆ ಮತ್ತಷ್ಟು ವೇಗ ದೊರೆಯುತ್ತದೆ ಎಂದರು. ಜೇಸಿಐ ಮತ್ತು ಲಯನ್ಸ್ ಕ್ಲಬ್‌ಗಳ ಮೂಲ ಉದ್ದೇಶ ಸಮಾಜ ಸೇವೆಯಾಗಿದ್ದು, ಜೇಸಿಐನಲ್ಲಿ ಯುವಜನರ ಹೆಚ್ಚಿನ ಪಾಲ್ಗೊಳ್ಳುವಿಕೆ ಕಾರ್ಯಕ್ರಮಗಳಿಗೆ ಚೈತನ್ಯ ನೀಡುತ್ತಿದೆ ಎಂದು ಹೇಳಿದರು.

ಶಿಕ್ಷಣ ಕ್ಷೇತ್ರದ ಪ್ರಶಸ್ತಿ ಸ್ವೀಕರಿಸಿದ ಉಡುಪಿ ಜಿಲ್ಲಾ ಎಸ್‌ಡಿಎಂಸಿ ಸಮನ್ವಯ ವೇದಿಕೆ ಅಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು, ಸರ್ಕಾರಿ ಶಾಲೆಗಳು ಅಭಿವೃದ್ಧಿಯಾದಾಗ ಮಾತ್ರ ಪ್ರತಿಯೊಂದು ಮಗುವಿಗೂ ಗುಣಮಟ್ಟದ ಹಾಗೂ ಮೌಲ್ಯಾಧಾರಿತ ಶಿಕ್ಷಣ ದೊರೆಯಲು ಸಾಧ್ಯ ಎಂದರು.
ಸರ್ಕಾರಿ ಶಾಲೆಗಳು ಎಲ್ಲ ಜಾತಿ, ಧರ್ಮ ಹಾಗೂ ವರ್ಗಗಳ ಮಕ್ಕಳು ಒಟ್ಟಾಗಿ ಕಲಿಯುವ ಸಂಸ್ಕಾರ ಕೇಂದ್ರಗಳಾಗಿವೆ. ತಾವು ಕಲಿತ ಸರ್ಕಾರಿ ಶಾಲೆಗೆ ವರ್ಷಕ್ಕೊಮ್ಮೆಯಾದರೂ ಭೇಟಿ ನೀಡಿ, ಸಾಧ್ಯವಾದಷ್ಟು ನೆರವು ನೀಡುವ ಮೂಲಕ ಶಾಲೆಗಳ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು. ಜೇಸಿಐನ ನಾಯಕತ್ವ ತರಬೇತಿ ತಮ್ಮ ವ್ಯಕ್ತಿತ್ವ ರೂಪುಗೊಳ್ಳಲು ಸಹಕಾರಿಯಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಜೇಸಿಐ ಭಾರತ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಕೆ. ಕಾರ್ತಿಕೆಯ ಮಧ್ಯಸ್ಥ, ಪೂರ್ವ ಅಧ್ಯಕ್ಷರಾದ ಜಯಚಂದ್ರ ಶೆಟ್ಟಿ, ನಾಗೇಶ್ ನಾವುಡ, ವಿಜಯ ಭಂಡಾರಿ, ಡಾ. ಸೋನಿ ಡಿಕೋಸ್ಟ, ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ಪೂರ್ವಾಧ್ಯಕ್ಷ ಯೂಸಫ್ ಸಲೀಂ, ಕಾರ್ಯದರ್ಶಿ ನವೀನ್ ಸಂಭ್ರಮ, ಸಪ್ತಾಹದ ಸಭಾಪತಿ ರಾಘವೇಂದ್ರ ಕುಲಾಲ್ ಹೆಮ್ಮಾಡಿ, ಲೇಡಿ ಜೇಸಿ ಸಂಯೋಜಕಿ ದೀಪಾ, ಯುವ ಜೇಸಿ ಸಂಚಾಲಕ ರಾಹುಲ್ ಗೋಡೆ ಸೇರಿದಂತೆ ಜೇಸಿಐ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಅಧ್ಯಕ್ಷ ಕಿರಣ್ ದೇವಾಡಿಗ ಸ್ವಾಗತಿಸಿದರು. ಸಪ್ತಾಹದ ಸಭಾಪತಿ ರಾಘವೇಂದ್ರ ಕುಲಾಲ್ ಹೆಮ್ಮಾಡಿ ನಿರೂಪಿಸಿ, ಜೇಸಿ ರಾಹುಲ್ ಗೋಡೆ ವಂದಿಸಿದರು.