ಡೈಲಿವಾರ್ತೆ:16/ಸೆ./2026

ಸಾಸ್ತಾನ: ಗಣೇಶೋತ್ಸವ ಮೆರವಣಿಗೆಯಲ್ಲಿ ಭಾವೈಕ್ಯತೆಯ ಸಂಭ್ರಮ: ಹಿಂದೂ ಬಾಂಧವರಿಗೆ ತಂಪು ಪಾನೀಯ, ಸಿಹಿ ವಿತರಿಸಿದ ಸಾಸ್ತಾನ-ಗುಂಡ್ಮಿ ಮುಸ್ಲಿಂ ಬಾಂಧವರು

ಕೋಟ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸಾಸ್ತಾನ-ಗುಂಡ್ಮಿ ವತಿಯಿಂದ ಆಯೋಜಿಸಿದ್ದ 42ನೇ ವರ್ಷದ ಗಣೇಶೋತ್ಸವದ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಅಪೂರ್ವ ಸಂದೇಶ ಮೂಡಿಬಂದಿತು.

ಸಾಸ್ತಾನದಿಂದ ಗುಂಡ್ಮಿ ಕಡೆಗೆ ಸಾಗಿದ ಗಣೇಶ ವಿಸರ್ಜನಾ ಮೆರವಣಿಗೆಯು ಗುಂಡ್ಮಿ ಜುಮ್ಮಾ ಮಸೀದಿ ಬಳಿ ಆಗಮಿಸಿದ ಸಂದರ್ಭದಲ್ಲಿ A2Z ಸೌಹಾರ್ದ ಟ್ರಸ್ಟ್, ಸಾಸ್ತಾನದ ವತಿಯಿಂದ ಮುಸ್ಲಿಂ ಬಾಂಧವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಹಿಂದೂ ಬಾಂಧವರಿಗೆ ತಂಪು ಪಾನೀಯ ಹಾಗೂ ಸಿಹಿ ವಿತರಿಸಿ ಆತ್ಮೀಯವಾಗಿ ಬರಮಾಡಿಕೊಂಡರು.

ಹಬ್ಬಗಳು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗದೆ, ಪರಸ್ಪರ ಪ್ರೀತಿ, ಗೌರವ ಮತ್ತು ಸಹಬಾಳ್ವೆಯ ಸಂದೇಶ ಸಾರುವ ವೇದಿಕೆಗಳಾಗಬೇಕು ಎಂಬುದಕ್ಕೆ ಈ ಸಂದರ್ಭ ಸಾಕ್ಷಿಯಾಯಿತು. ಗಣೇಶೋತ್ಸವದ ಮೆರವಣಿಗೆಯಲ್ಲಿ ಮುಸ್ಲಿಂ ಬಾಂಧವರು ಸೌಹಾರ್ದತೆಯಿಂದ ಕೈಜೋಡಿಸಿರುವುದು ಸಾಸ್ತಾನ-ಗುಂಡ್ಮಿ ಭಾಗದ ಸಾಮರಸ್ಯದ ಪರಂಪರೆಗೆ ಮತ್ತಷ್ಟು ಮೆರುಗು ನೀಡಿತು.

ಧರ್ಮಗಳು ವಿಭಿನ್ನವಾಗಿದ್ದರೂ ಮಾನವೀಯತೆ ಒಂದೇ ಎಂಬ ಸಂದೇಶವನ್ನು ಸಾರಿದ ಈ ಸೌಹಾರ್ದದ ನಡೆ “ಹಬ್ಬ ನಮ್ಮದು-ಸಂತಸ ಎಲ್ಲರದು” ಎಂಬ ಭಾವನೆಯನ್ನು ಪ್ರತಿಬಿಂಬಿಸಿತು. ಪರಸ್ಪರ ಧರ್ಮಗಳ ಆಚರಣೆಗಳಿಗೆ ಗೌರವ ನೀಡುವ ಮೂಲಕ ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಭಾವೈಕ್ಯತೆಯನ್ನು ಬಲಪಡಿಸಬಹುದು ಎಂಬುದನ್ನು ಈ ಕಾರ್ಯಕ್ರಮ ಸಾರಿತು.

ಈ ಸಂದರ್ಭದಲ್ಲಿ A2Z ಸೌಹಾರ್ದ ಟ್ರಸ್ಟ್ ಅಧ್ಯಕ್ಷ ರಝಕ್ ಹಾಗೂ ಅಲ್ತಾಪ್ ಮತ್ತು ಟ್ರಸ್ಟ್‌ನ ಸದಸ್ಯರು, ಗುಂಡ್ಮಿ ಜುಮ್ಮಾ ಮಸೀದಿಯ ಅಧ್ಯಕ್ಷರು, ಸರ್ವ ಸದಸ್ಯರು ಹಾಗೂ ಜಮಾತ್ ಬಾಂಧವರು ಉಪಸ್ಥಿತರಿದ್ದರು.