


ಡೈಲಿವಾರ್ತೆ:16/ಸೆ./2026

ಕೋಟ ಅಮೃತೇಶ್ವರೀ ದೇಗುಲಕ್ಕೆ ಮುಜರಾಯಿ ಸಚಿವ ಕೆ.ಎಸ್ ಬಸವಂತಪ್ಪ ಭೇಟಿ: ಕರಾವಳಿಯ ಸಚಿವ ಸಂಪುಟ ಸಭೆಯಲ್ಲಿ
ಮೀನುಗಾರಿಕೆ, ಪ್ರವಾಸೋದ್ಯಮ – ದೇಗುಲ ಅಭಿವೃದ್ಧಿ ಪೂರಕ ನಿರ್ಧಾರ- ಸಚಿವ ಕೆ.ಎಸ್ ಬಸವಂತಪ್ಪ

ಕೋಟ: ಇದೇ ಮೊದಲ ಬಾರಿಗೆ ಕರಾವಳಿ ಭಾಗದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಕರಾವಳಿಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ರಾಜ್ಯದ ಬಂದರು ಮತ್ತು ಮೀನುಗಾರಿಕೆ ಹಾಗೂ ಮುಜರಾಯಿ ಸಚಿವ ಕೆ.ಎಸ್. ಬಸವಂತಪ್ಪ ಹೇಳಿದರು.

ಬುಧವಾರ ಕೋಟದ ಅಮೃತೇಶ್ವರೀ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರಾವಳಿ ಭಾಗದ ಮೂಲ ವೃತ್ತಿಯಾಗಿರುವ ಮೀನುಗಾರಿಕೆ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಸರ್ಕಾರ ಕಾರ್ಯತಂತ್ರ ರೂಪಿಸಲಿದೆ ಎಂದರು.
ಕರಾವಳಿ ಭಾಗದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದರ ಜೊತೆಗೆ, ದೇಗುಲಗಳ ಅಭಿವೃದ್ಧಿಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ ಮುಂದಿನ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಸಚಿವರು ತಿಳಿಸಿದರು.
ಸಚಿವರಿಗೆ ದೇಗುಲದಲ್ಲಿ ಗೌರವ:

ಅಮೃತೇಶ್ವರೀ ದೇಗುಲದಲ್ಲಿ ಪೂಜೆ ಸಲ್ಲಿಸಿದ ಸಚಿವ ಕೆ.ಎಸ್. ಬಸವಂತಪ್ಪ ಅವರನ್ನು ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಆನಂದ್ ಸಿ. ಕುಂದರ್ ಶಾಲು ಹೊದಿಸಿ ಗೌರವಿಸಿದರು. ಬಳಿಕ ಪ್ರಸಾದ ವಿತರಿಸಲಾಯಿತು


ಈ ಸಂದರ್ಭದಲ್ಲಿ ದೇಗುಲದ ಟ್ರಸ್ಟಿಗಳಾದ ಶಿವ ಪೂಜಾರಿ, ಗಣೇಶ್ ನೆಲ್ಲಿಬೆಟ್ಟು, ಸುಭಾಷ್ ಶೆಟ್ಟಿ, ಚಂದ್ರ ಆಚಾರ್, ಸುಬ್ರಾಯ ಜೋಗಿ, ರತನ್ ಐತಾಳ್, ಸುಧಾ ಪೂಜಾರಿ, ಜ್ಯೋತಿ ಕಾಂಚನ್, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ. ತಿಮ್ಮಪೂಜಾರಿ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಎಂ.ಎ. ಗಫೂರ್, ರಾಜು ಪೂಜಾರಿ, ಅಜಿತ್ ಶೆಟ್ಟಿ, ಕೋಟ ಸಿ.ಎ. ಬ್ಯಾಂಕ್ ಅಧ್ಯಕ್ಷ ಡಾ. ಕೃಷ್ಣ ಕಾಂಚನ್, ಸಿಇಒ ಶರತ್ ಕುಮಾರ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.