ಡೈಲಿವಾರ್ತೆ:22/ಸೆ./2026

ರೈಲಿನಲ್ಲಿ ಅಕ್ರಮ ಗಾಂಜಾ ಸಾಗಾಟ: ಆರೋಪಿ ಪೊಲೀಸರ ಬಲೆಗೆ

ಬಂಗಾರಪೇಟೆ: ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹5 ಲಕ್ಷ ಮೌಲ್ಯದ 10 ಕೆಜಿ ಗಾಂಜಾವನ್ನು ರೈಲ್ವೆ ಪೊಲೀಸರು ಜಪ್ತಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ರೈಲು ನಿಲ್ದಾಣದಲ್ಲಿ ನಡೆದಿದೆ.

ಒಡಿಶಾ ರಾಜ್ಯದ ಗಂಜಾಂ ಜಿಲ್ಲೆಯ ಕಲ್ಲಿಕೋಟೆ ಮೂಲದ ನರೇಂದ್ರ ಕರಣ್ (23) ವಶಕ್ಕೆ ಪಡೆದಿರುವ ಆರೋಪಿ. ಈತ ಹೊರ ರಾಜ್ಯದಿಂದ ರೈಲಿನ ಮೂಲಕ ಗಾಂಜಾವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಎನ್ನಲಾಗಿದೆ.
ಬಂಗಾರಪೇಟೆ ರೈಲು ನಿಲ್ದಾಣದಲ್ಲಿ ರೈಲಿನಿಂದ ಇಳಿದ ಬಳಿಕ ಗಾಂಜಾವನ್ನು ತೆಗೆದುಕೊಂಡು ನಿಲ್ದಾಣದಿಂದ ಹೊರಗೆ ತೆರಳಲು ಆರೋಪಿ ಯತ್ನಿಸುತ್ತಿದ್ದ ಎನ್ನಲಾಗಿದೆ. ಈ ವೇಳೆ ಆತನ ಚಲನವಲನದ ಬಗ್ಗೆ ಅನುಮಾನಗೊಂಡ ರೈಲ್ವೆ ಪೊಲೀಸರು ತಪಾಸಣೆ ನಡೆಸಿದ್ದು, ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 10 ಕೆಜಿ ಗಾಂಜಾ ಪತ್ತೆಯಾಗಿದೆ.

ಪೊಲೀಸರು ಗಾಂಜಾವನ್ನು ವಶಕ್ಕೆ ಪಡೆದು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಜಪ್ತಿಯಾಗಿರುವ ಗಾಂಜಾದ ಅಂದಾಜು ಮೌಲ್ಯ ಸುಮಾರು ₹5 ಲಕ್ಷ ಎಂದು ತಿಳಿದುಬಂದಿದೆ.
ಹೊರ ರಾಜ್ಯಗಳಿಂದ ರೈಲು ಮಾರ್ಗದ ಮೂಲಕ ಮಾದಕ ವಸ್ತುಗಳ ಸಾಗಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ರೈಲ್ವೆ ಪೊಲೀಸರು ನಡೆಸಿದ ಕಾರ್ಯಾಚರಣೆ ಮಹತ್ವ ಪಡೆದುಕೊಂಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.
ರೈಲ್ವೆ ಪೊಲೀಸರ ಕಾರ್ಯಾಚರಣೆಯನ್ನು ಬೆಂಗಳೂರು ರೈಲ್ವೆ ಪೊಲೀಸ್ ಅಧೀಕ್ಷಕಿ ಸಾರಾ ಫಾತಿಮಾ ಪ್ರಶಂಸಿಸಿದ್ದಾರೆ.