ಡೈಲಿವಾರ್ತೆ:24/ಸೆ./2026

ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಹೊತ್ತಿ ಉರಿದ ಸ್ಲೀಪರ್ ಬಸ್: 9 ಮಂದಿ ಸಜೀವ ದಹನ

ಲಕ್ನೋ, ಸೆ.24: ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯ ಗ್ರೇಟರ್ ನೋಯ್ಡಾ ವ್ಯಾಪ್ತಿಯ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಬುಧವಾರ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಸ್ಲೀಪರ್ ಬಸ್‌ನಲ್ಲಿದ್ದ 9 ಮಂದಿ ಸಜೀವ ದಹನಗೊಂಡಿದ್ದು, ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ದೆಹಲಿಯಿಂದ ಉತ್ತರ ಪ್ರದೇಶದ ಮಹೋಬಾಗೆ ತೆರಳುತ್ತಿದ್ದ ಬಿಹಾರ ನೋಂದಣಿ ಸಂಖ್ಯೆಯ BR32 PA8647ರ ‘ರಾಜ್ ಕಲ್ಪನಾ ಟ್ರಾವೆಲ್ಸ್’ಗೆ ಸೇರಿದ ಡಬಲ್ ಡೆಕ್ಕರ್ ಸ್ಲೀಪರ್ ಬಸ್‌ನಲ್ಲಿ 35ಕ್ಕೂ ಅಧಿಕ ಪ್ರಯಾಣಿಕರಿದ್ದರು ಎನ್ನಲಾಗಿದೆ. ಗ್ರೇಟರ್ ನೋಯ್ಡಾದಿಂದ ಆಗ್ರಾ ಕಡೆಗೆ ತೆರಳುತ್ತಿದ್ದ ವೇಳೆ ದಯಾನತ್‌ಪುರ ಗ್ರಾಮದ ಬಳಿ ಏಕಾಏಕಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಚಾಲಕ ಸಮಯಪ್ರಜ್ಞೆ ಮೆರೆದು ಬಸ್ಸನ್ನು ಎಕ್ಸ್‌ಪ್ರೆಸ್‌ವೇ ಬದಿಗೆ ನಿಲ್ಲಿಸಿದರೂ, ಕೆಲವೇ ಕ್ಷಣಗಳಲ್ಲಿ ಬೆಂಕಿ ಮತ್ತು ದಟ್ಟ ಹೊಗೆ ಇಡೀ ಬಸ್‌ಗೆ ವ್ಯಾಪಿಸಿದೆ. ಇದರಿಂದ ಪ್ರಯಾಣಿಕರಲ್ಲಿ ತೀವ್ರ ಆತಂಕ ಸೃಷ್ಟಿಯಾಯಿತು. ಬಸ್‌ನ ಬಾಗಿಲಿನ ಭಾಗದಲ್ಲಿ ಬೆಂಕಿ ವ್ಯಾಪಿಸಿದ್ದರಿಂದ ಹೊರಬರಲು ಸಾಧ್ಯವಾಗದೆ ಹಲವು ಪ್ರಯಾಣಿಕರು ಕಿಟಕಿಗಳ ಗಾಜು ಒಡೆದು ರಸ್ತೆಗೆ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ.
ಆದರೆ ಗಾಢ ನಿದ್ರೆಯಲ್ಲಿದ್ದವರು ಹಾಗೂ ತಕ್ಷಣ ಹೊರಬರಲು ಸಾಧ್ಯವಾಗದ ಮಹಿಳೆಯರು, ವೃದ್ಧರು ಮತ್ತು ಮಕ್ಕಳು ಸೇರಿದಂತೆ 9 ಮಂದಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಸಮೀಪದ ಕೈಲಾಶ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ.

ಪಟಾಕಿ ಸಿಡಿದಂತೆ ಭಾರೀ ಸದ್ದು:

ಬಸ್‌ಗೆ ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ನಿರಂತರವಾಗಿ ಪಟಾಕಿ ಸಿಡಿಯುವ ರೀತಿಯ ಭಾರೀ ಸದ್ದುಗಳು ಕೇಳಿಬಂದಿದ್ದವು ಎಂದು ಪ್ರತ್ಯಕ್ಷದರ್ಶಿಗಳು ಹಾಗೂ ಟೋಲ್ ಪ್ಲಾಜಾ ಸಿಬ್ಬಂದಿ ತಿಳಿಸಿದ್ದಾರೆ. ಹೀಗಾಗಿ ಬಸ್‌ನ ಲಗೇಜ್ ವಿಭಾಗದಲ್ಲಿ ಅನುಮತಿಯಿಲ್ಲದೆ ಪಟಾಕಿ ಅಥವಾ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಸಾಗಿಸಲಾಗುತ್ತಿತ್ತೇ ಎಂಬ ಅನುಮಾನ ವ್ಯಕ್ತವಾಗಿದೆ.
ಘಟನೆಯ ನಿಖರ ಕಾರಣ ತಿಳಿಯಲು ವಿಧಿವಿಜ್ಞಾನ (ಫೊರೆನ್ಸಿಕ್) ತಂಡ ತನಿಖೆ ಆರಂಭಿಸಿದ್ದು, ಬಸ್‌ನ ಅವಶೇಷಗಳು ಹಾಗೂ ಲಗೇಜ್ ವಿಭಾಗದಲ್ಲಿದ್ದ ವಸ್ತುಗಳನ್ನು ಪರಿಶೀಲಿಸಲಾಗುತ್ತಿದೆ.

ಅರ್ಧ ಗಂಟೆಗೂ ಅಧಿಕ ರಕ್ಷಣಾ ಕಾರ್ಯಾಚರಣೆ:
ಮಾಹಿತಿ ತಿಳಿದ ತಕ್ಷಣ 4–5 ಅಗ್ನಿಶಾಮಕ ವಾಹನಗಳು, ಎಕ್ಸ್‌ಪ್ರೆಸ್‌ವೇ ತುರ್ತು ಗಸ್ತು ಪಡೆ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಅರ್ಧ ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.

ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಜೆವರ್ ಟೋಲ್ ಹಾಗೂ ಫಲೈಡಾ ಕ್ರಾಸಿಂಗ್ ನಡುವಿನ ಸಂಚಾರವನ್ನು ಸುಮಾರು 20 ನಿಮಿಷಗಳ ಕಾಲ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು.

ಸ್ಲೀಪರ್ ಬಸ್‌ಗಳ ಸುರಕ್ಷತೆ ಪ್ರಶ್ನೆ:
ಈ ದುರಂತದ ಬಳಿಕ ಡಬಲ್ ಡೆಕ್ಕರ್ ಸ್ಲೀಪರ್ ಬಸ್‌ಗಳಲ್ಲಿನ ಸುರಕ್ಷತಾ ವ್ಯವಸ್ಥೆಗಳ ಕುರಿತು ಮತ್ತೊಮ್ಮೆ ಪ್ರಶ್ನೆಗಳು ಎದ್ದಿವೆ. ತುರ್ತು ನಿರ್ಗಮನ ದ್ವಾರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವುದು, ಅಗ್ನಿಶಾಮಕ ಉಪಕರಣಗಳ ಲಭ್ಯತೆ ಹಾಗೂ ಪ್ರಯಾಣಿಕರ ಸುರಕ್ಷತಾ ಕ್ರಮಗಳ ಪಾಲನೆ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.