ಡೈಲಿವಾರ್ತೆ:24/ಸೆ./2026

ರಮಾನಾಥ ರೈ ಅಪಘಾತದ ಕುರಿತು ಅವಹೇಳನಕಾರಿ ಪೋಸ್ಟ್: ಪ್ರಭಾಕರ ಹೆಗ್ಡೆ ವಿರುದ್ಧ ಪ್ರಕರಣ ದಾಖಲು

ಬಂಟ್ವಾಳ : ಮಾಜಿ ಸಚಿವ ಬಿ. ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹಾಗೂ ಬೆದರಿಕೆಯ ರೀತಿಯ ಸಂದೇಶ ಪ್ರಕಟಿಸಿದ ಆರೋಪದಡಿ ಪ್ರಭಾಕರ ಹೆಗ್ಡೆ ಎಂಬವರ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ. 130/2026 ರಂತೆ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಕಲಂ 351(2), 352 ರಡಿ ಪ್ರಕರಣ ದಾಖಲಾಗಿದ್ದು, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದಾರ್ ಅವರು ದೂರು ನೀಡಿದ್ದಾರೆ.

ಸೆ. 20 ರಂದು ಮಾಜಿ ಸಚಿವ ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಕಾರು ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169 ರ ಸಾಣೂರು ಶ್ರೀರಾಮ ಮಂದಿರದ ಡಿವೈಡರ್ ಕ್ರಾಸ್ ಬಳಿ ಅಪಘಾತಕ್ಕೀಡಾಗಿತ್ತು. ಅಪಘಾತದಲ್ಲಿ ರಮಾನಾಥ ರೈ ಸೇರಿದಂತೆ ಅವರ ಆಪ್ತ ಸಹಾಯಕರು, ಅಂಗರಕ್ಷಕರು ಹಾಗೂ ಕಾರು ಚಾಲಕರಿಗೆ ಗಾಯಗಳಾಗಿದ್ದು, ಮಂಗಳೂರಿನ ಯೆನೆಪೋಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತದ ದೃಶ್ಯವನ್ನು ಯಾರೋ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್‌ಗೆ ಆರೋಪಿ ಪ್ರಭಾಕರ ಹೆಗ್ಡೆ ಅವರು ಅವಹೇಳನಕಾರಿ ಹಾಗೂ ಬೆದರಿಕೆಯ ಸಂದೇಶವನ್ನು ಪ್ರಕಟಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಮೂಲಕ ನಿಂದನಾತ್ಮಕ ಭಾಷೆ ಬಳಸಿ ಬೆದರಿಕೆ ಹಾಕಿರುವ ಆರೋಪದಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.

ಮಾನ್ಯ ನ್ಯಾಯಾಲಯದ ಡಿಸ್ ನಂ. 845/2026 ಕ್ಕೆ ಸಂಬಂಧಿಸಿದಂತೆ ಎಂ.ಪಿ.ಸಿ. 2319ರ ಮೂಲಕ ಬಂದ ದೂರನ್ನು ಸ್ವೀಕರಿಸಿದ ಬಳಿಕ ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.