


ಡೈಲಿವಾರ್ತೆ:25/ಸೆ./2026

ಕುಂದಾಪುರ: ಶಾರ್ಜಾದಲ್ಲಿ ಹತ್ಯೆಗೀಡಾದ ಆಲ್ವಿನ್ ಪ್ರಕಾಶ್ ಕುಂದರ್ ಪಾರ್ಥಿವ ಶರೀರ ತವರಿಗೆ

ಕುಂದಾಪುರ: ಶಾರ್ಜಾದಲ್ಲಿ ಅಮಾನವೀಯವಾಗಿ ಹತ್ಯೆಗೀಡಾದ ಕುಂದಾಪುರ ತಾಲೂಕಿನ ಹೊನ್ನನಕೇರಿ ನಿವಾಸಿ ಆಲ್ವಿನ್ ಪ್ರಕಾಶ್ ಕುಂದರ್ ಅವರ ಪಾರ್ಥಿವ ಶರೀರ ಶುಕ್ರವಾರ ಸ್ವಗ್ರಾಮಕ್ಕೆ ತಲುಪಿದ್ದು, ಕುಟುಂಬಸ್ಥರು, ಬಂಧುಗಳು ಹಾಗೂ ಆಪ್ತರ ಆಕ್ರಂದನ ಮುಗಿಲು ಮುಟ್ಟಿತು.

ಶಾರ್ಜಾದಲ್ಲಿ ನಡೆದ ಭೀಕರ ಹತ್ಯೆ ಪ್ರಕರಣದಲ್ಲಿ ಮೃತಪಟ್ಟ ಆಲ್ವಿನ್ ಅವರ ಪಾರ್ಥಿವ ಶರೀರವನ್ನು ಹೊನ್ನನಕೇರಿಯಲ್ಲಿರುವ ನಿವಾಸಕ್ಕೆ ತರಲಾಯಿತು. ಮೃತದೇಹವನ್ನು ಕಂಡ ಕುಟುಂಬಸ್ಥರು ಹಾಗೂ ಬಂಧು-ಬಳಗದವರು ದುಃಖತಪ್ತರಾದರು. ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಆಪ್ತರು ಅಂತಿಮ ದರ್ಶನ ಪಡೆದು ಮೃತರಿಗೆ ಗೌರವ ಸಲ್ಲಿಸಿದರು.

ನಿವಾಸದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಆಲ್ವಿನ್ ಅವರ ಆತ್ಮಕ್ಕೆ ಶಾಂತಿ ಕೋರಿ ಕುಟುಂಬಸ್ಥರು ಹಾಗೂ ಬಂಧುಗಳು ಕಂಬನಿ ಮಿಡಿದರು. ದುಃಖದ ವಾತಾವರಣದಲ್ಲಿ ಅಂತಿಮ ದರ್ಶನದ ವೇಳೆ ಕುಟುಂಬಸ್ಥರ ರೋದನ ಮನಕಲಕುವಂತಿತ್ತು.
ಬಳಿಕ ಹೊನ್ನನಕೇರಿಯ ಪ್ರೊಟೆಸ್ಟಂಟ್ ಸಿ.ಎಸ್.ಐ. ಕೃಪಾ ಚರ್ಚ್‌ನಲ್ಲಿ ಆಲ್ವಿನ್ ಪ್ರಕಾಶ್ ಕುಂದರ್ ಅವರ ಅಂತಿಮ ವಿಧಿವಿಧಾನಗಳು ನಡೆಯಲಿವೆ. ಕುಟುಂಬಸ್ಥರು, ಬಂಧು-ಮಿತ್ರರು ಹಾಗೂ ಆಪ್ತರು ಅಂತಿಮ ವಿಧಿವಿಧಾನದಲ್ಲಿ ಪಾಲ್ಗೊಂಡು ಮೃತರಿಗೆ ಅಂತಿಮ ನಮನ ಸಲ್ಲಿಸಲಿದ್ದಾರೆ.