ಡೈಲಿವಾರ್ತೆ:25/ಸೆ./2026

ಸಿದ್ದರಾಮಯ್ಯ ಬೆಳ್ಳಿತೆರೆಗೆ ಗ್ರ್ಯಾಂಡ್ ಎಂಟ್ರಿ:
‘ಮುಖ್ಯಮಂತ್ರಿ’ ಪಾತ್ರದಲ್ಲಿ ಮಾಜಿ ಸಿಎಂ ಅಭಿನಯಕ್ಕೆ ಸಜ್ಜು!

ಬೆಂಗಳೂರು: ಕರ್ನಾಟಕದ ಹಿರಿಯ ರಾಜಕಾರಣಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಬೆಳ್ಳಿತೆರೆಗೆ ಕಾಲಿಡಲು ಸಜ್ಜಾಗಿದ್ದಾರೆ. ವಿಶೇಷವೆಂದರೆ, ಸಿನಿಮಾದಲ್ಲಿಯೂ ಅವರು ಮುಖ್ಯಮಂತ್ರಿಯ ಪಾತ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.

ನಟ ಹಾಗೂ ನಿರ್ಮಾಪಕ ರಾಜೇಶ ಗೌಡ ಅವರ ಆರ್.ಎ. ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿರುವ ಈ ಚಿತ್ರವು ಪೂರ್ಣ ಪ್ರಮಾಣದ ಕಮರ್ಷಿಯಲ್ ಸಿನಿಮಾವಾಗಿದ್ದು, ಸಿದ್ದರಾಮಯ್ಯ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನಲಾಗಿದೆ. ಕಥೆಯನ್ನು ಕೇಳಿ ಮೆಚ್ಚಿಕೊಂಡಿರುವ ಸಿದ್ದರಾಮಯ್ಯ ಅವರು, ಚಿತ್ರದಲ್ಲಿನ ಮುಖ್ಯಮಂತ್ರಿಯ ಪಾತ್ರ ನಿರ್ವಹಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಚಿತ್ರತಂಡ ಹೇಳಿದೆ.

ಚಿತ್ರದ ಮತ್ತೊಂದು ವಿಶೇಷವೆಂದರೆ, ಕೇವಲ 48 ಗಂಟೆಗಳಲ್ಲಿ ಸಂಪೂರ್ಣ ಸಿನಿಮಾ ನಿರ್ಮಾಣ ಮಾಡುವ ಮಹತ್ವಾಕಾಂಕ್ಷೆಯ ಯೋಜನೆ ರೂಪಿಸಲಾಗಿದೆ. ಚಿತ್ರಕಥೆ ರಚನೆಯಿಂದ ಹಿಡಿದು ಚಿತ್ರೀಕರಣ, ಪೋಸ್ಟ್‌-ಪ್ರೊಡಕ್ಷನ್, ಸೆನ್ಸಾರ್ ಪ್ರಕ್ರಿಯೆ ಹಾಗೂ ಚಿತ್ರಮಂದಿರಗಳಲ್ಲಿ ಬಿಡುಗಡೆವರೆಗೆ ಸಂಪೂರ್ಣ ಪ್ರಕ್ರಿಯೆಯನ್ನು 48 ಗಂಟೆಗಳೊಳಗೆ ಪೂರ್ಣಗೊಳಿಸಿ ವಿಶ್ವದಾಖಲೆ ನಿರ್ಮಿಸುವ ಗುರಿಯನ್ನು ಚಿತ್ರತಂಡ ಹೊಂದಿದೆ.
ಚಿತ್ರಕ್ಕೆ ಇನ್ನೂ ಅಧಿಕೃತವಾಗಿ ಶೀರ್ಷಿಕೆ ಅಂತಿಮಗೊಂಡಿಲ್ಲ. ಆದರೆ ‘ಮುಖ್ಯಮಂತ್ರಿ’ ಎಂಬ ಹೆಸರನ್ನು ಇಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸಿದ್ದರಾಮಯ್ಯ ಅವರಿಗೆ ನಟನೆ ಹೊಸದೇನಲ್ಲ. ವಿದ್ಯಾರ್ಥಿ ಜೀವನದಲ್ಲಿಯೇ ಅವರು ಹಲವು ನಾಟಕಗಳಲ್ಲಿ ಅಭಿನಯಿಸಿದ್ದರು. 2017ರಲ್ಲಿ ಕವಿತಾ ಲಂಕೇಶ್ ನಿರ್ದೇಶನದ ‘ಸಮ್ಮರ್ ಹಾಲಿಡೇಸ್’ ಮಕ್ಕಳ ಚಿತ್ರದಲ್ಲೂ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಇದಕ್ಕೂ ಮೊದಲು ಸಿದ್ದರಾಮಯ್ಯ ಅವರ ರಾಜಕೀಯ ಜೀವನವನ್ನು ಆಧರಿಸಿದ ‘ಲೀಡರ್ ರಾಮಯ್ಯ’ ಬಯೋಪಿಕ್ ನಿರ್ಮಾಣದ ಬಗ್ಗೆಯೂ ಸುದ್ದಿಯಾಗಿತ್ತು. ಈ ಚಿತ್ರದಲ್ಲಿ ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ವರದಿಗಳು ಹರಿದಾಡಿದ್ದವು.

ಇನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ಈ ಹಿಂದೆ ಸಿನಿಮಾವೊಂದರಲ್ಲಿ ಮುಖ್ಯಮಂತ್ರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಸಿದ್ದರಾಮಯ್ಯ ಅವರೂ ಮುಖ್ಯಮಂತ್ರಿಯ ಪಾತ್ರದಲ್ಲೇ ಬೆಳ್ಳಿತೆರೆಗೆ ಬರಲು ಸಜ್ಜಾಗಿರುವುದು ರಾಜಕೀಯ ಹಾಗೂ ಚಿತ್ರರಂಗದ ವಲಯದಲ್ಲಿ ಕುತೂಹಲ ಮೂಡಿಸಿದೆ.