


ಡೈಲಿವಾರ್ತೆ:25/ಸೆ./2026

ಕಾಪು: ವಾಟ್ಸ್‌ಆ್ಯಪ್ ಪೋಸ್ಟ್‌ಗೆ ₹5 ಲಕ್ಷ ಬೇಡಿಕೆ; ಜೀವ ಬೆದರಿಕೆ ಆರೋಪ-ಯುವಕ ಆತ್ಮಹತ್ಯೆಗೆ ಯತ್ನ

ಕಾಪು: ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಹಾಕಿದ್ದ ಪೋಸ್ಟ್ ವಿಚಾರವಾಗಿ ಯುವಕನೊಬ್ಬನಿಗೆ ₹25 ಲಕ್ಷ ಮಾನನಷ್ಟ ಪರಿಹಾರ ನೀಡುವಂತೆ ನೋಟಿಸ್ ಕಳುಹಿಸಿ, ಬಳಿಕ ₹5 ಲಕ್ಷ ಹಣ ನೀಡುವಂತೆ ಒತ್ತಾಯಿಸಿ ಜೀವ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದ್ದು, ಇದರಿಂದ ಮಾನಸಿಕವಾಗಿ ನೊಂದ ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಉಳಿಯಾರಗೋಳಿ ಗ್ರಾಮದ ರಿಜ್ವಾನ್ ಹಾಜಿ ಮೊಹಮ್ಮದ್ (23) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಪೊಲಿಪುವಿನ ಬೈಕ್ ಗ್ಯಾರೇಜ್‌ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ರಿಜ್ವಾನ್, ಸೆ.10ರಂದು ಕಾಪು ಮಸೀದಿ ವಿಚಾರಕ್ಕೆ ಸಂಬಂಧಿಸಿದ ಪ್ರಕರಣದ ಕುರಿತು ಪ್ರಕಟವಾಗಿದ್ದ ಪತ್ರಿಕಾ ವರದಿಯ ತುಣುಕನ್ನು ವಾಟ್ಸ್‌ಆ್ಯಪ್‌ನ ‘Eid Meelad rally’ ಸ್ನೇಹಿತರ ಗ್ರೂಪ್‌ಗೆ ಹಂಚಿಕೊಂಡಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸೆ.21ರಂದು ರಿಜ್ವಾನ್ ಹೆಸರಿಗೆ ವಕೀಲರ ಮೂಲಕ ನೋಂದಾಯಿತ ಅಂಚೆಯಲ್ಲಿ ನೋಟಿಸ್ ಬಂದಿದ್ದು, ಅವಹೇಳನಕಾರಿ ಪೋಸ್ಟ್ ಹಾಕಿ ಅಮೀರ್ ಹಂಝ ರಜಬ್ ಅವರ ಗೌರವಕ್ಕೆ ಧಕ್ಕೆ ತಂದಿರುವುದಾಗಿ ಆರೋಪಿಸಿ ಕ್ಷಮೆಯಾಚಿಸುವಂತೆ ಹಾಗೂ ₹25 ಲಕ್ಷ ಮಾನನಷ್ಟ ಪರಿಹಾರ ನೀಡುವಂತೆ ತಿಳಿಸಲಾಗಿತ್ತು ಎನ್ನಲಾಗಿದೆ.
ಸೆ.22ರಂದು ಸಂಜೆ ಸುಮಾರು 5 ಗಂಟೆಗೆ ಪೊಲಿಪುವಿನಲ್ಲಿ ಟೈಯರ್ ಅಂಗಡಿಗೆ ತೆರಳುತ್ತಿದ್ದ ವೇಳೆ NH 66ರ ಸರ್ವೀಸ್ ರಸ್ತೆಯ ಬಳಿ ರಿಜ್ವಾನ್ ಅವರನ್ನು ಕಾರಿನಲ್ಲಿ ಬಂದ ಇಮ್ತಿಯಾಜ್ ಮತ್ತು ಅಮೀರ್ ಹಂಝ ತಡೆದು ನಿಲ್ಲಿಸಿ, ವಾಟ್ಸ್‌ಆ್ಯಪ್ ಪೋಸ್ಟ್ ವಿಚಾರವಾಗಿ ಪ್ರಶ್ನಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ವೇಳೆ ಕ್ಷಮೆ ಕೇಳಿದರೂ, ₹25 ಲಕ್ಷ ಬದಲಾಗಿ ಸ್ಥಳದಲ್ಲೇ ₹5 ಲಕ್ಷ ನೀಡಿದರೆ ಪ್ರಕರಣವನ್ನು ಇಲ್ಲಿಗೇ ಮುಕ್ತಾಯಗೊಳಿಸುವುದಾಗಿ, ಹಣ ನೀಡದಿದ್ದರೆ ನ್ಯಾಯಾಲಯದ ಮೂಲಕ ₹25 ಲಕ್ಷ ವಸೂಲಿ ಮಾಡುವುದಾಗಿ ಹಾಗೂ ಕಾಪುವಿನಲ್ಲಿ ಜೀವಂತವಾಗಿರಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಘಟನೆಯ ಬಳಿಕ ಮಾನಸಿಕವಾಗಿ ನೊಂದಿದ್ದ ರಿಜ್ವಾನ್, ₹5 ಲಕ್ಷ ಹಣ ಹೊಂದಿಸಲಾಗದೇ ಹಾಗೂ ಆರೋಪಿಗಳು ನೀಡಿದ ಕಿರುಕುಳವನ್ನು ತಾಳಲಾರದೆ ಆತ್ಮಹತ್ಯೆಗೆ ನಿರ್ಧರಿಸಿದ್ದರು ಎನ್ನಲಾಗಿದೆ. ಸೆ.23ರಂದು ರಾತ್ರಿ ಕಾಪು ಪೇಟೆಯ ಅಂಗಡಿಯೊಂದರಿಂದ ಫ್ಲೋರ್ ಕ್ಲೀನರ್ ಖರೀದಿಸಿ ಕಾಪುವಿನ ಕಾಂಚನ್ ಮೂಲಸ್ಥಾನದ ಬಳಿ ಸೇವಿಸಿ ಬಳಿಕ ಮನೆಗೆ ತೆರಳಿದ್ದಾರೆ. ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ತಾಯಿಗೆ ವಿಷಯ ತಿಳಿಸಿದ್ದು, ಬಳಿಕ ಮಾಲೀಕ ಅಬ್ದುಲ್ ರಜಾಕ್ ಅವರಿಗೆ ಕರೆ ಮಾಡಿ ಆಸ್ಪತ್ರೆಗೆ ಕರೆದೊಯ್ಯುವಂತೆ ಮನವಿ ಮಾಡಿದ್ದಾರೆ. ಅದರಂತೆ ಅವರನ್ನು ಉಡುಪಿಯ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಮೀರ್ ಹಂಝ ಹಾಗೂ ಇಸ್ಮಾಯಿಲ್ ಅವರು ₹5 ಲಕ್ಷ ನೀಡುವಂತೆ ಬೆದರಿಕೆ ಹಾಕಿದ್ದು, ಇದರಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಪ್ರಯತ್ನಿಸಿರುವುದಾಗಿ ರಿಜ್ವಾನ್ ನೀಡಿದ ದೂರಿನ ಆಧಾರದ ಮೇಲೆ ಕಾಪು ಠಾಣೆಯಲ್ಲಿ ಅಪರಾಧ ಕ್ರಮಾಂಕ 119/2026ರಲ್ಲಿ BNS ಕಲಂ 308(4), 126(2), 351(3), 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳು ತನಿಖೆಯಲ್ಲಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.