


ಡೈಲಿವಾರ್ತೆ:25/ಸೆ./2026

ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣ: ಕಲ್ಲಡ್ಕ ಪ್ರಭಾಕರ್ ಭಟ್‌ಗೆ ಪೊಲೀಸರ ನೋಟಿಸ್

ಮಂಗಳೂರು, ಸೆ.25: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾಕೋಡಿ (ಕುರಿಯಾಲ ಗ್ರಾಮ) ಬಳಿ ನಡೆದ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣದ ತನಿಖೆ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಪೊಲೀಸ್ ಇಲಾಖೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.
ನೋಟಿಸ್ ಹಿನ್ನೆಲೆಯಲ್ಲಿ ಸೆ.26ರಂದು ತನಿಖಾಧಿಕಾರಿಗಳು ಕಲ್ಲಡ್ಕದಲ್ಲಿರುವ ಪ್ರಭಾಕರ್ ಭಟ್ ಅವರ ನಿವಾಸಕ್ಕೆ ತೆರಳಿ ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
2025ರ ಮೇ 25ರಂದು ಇರಾಕೋಡಿ ಬಳಿ ಪಿಕ್‌ಅಪ್ ವಾಹನದಿಂದ ಮರಳು ಇಳಿಸುತ್ತಿದ್ದ ವೇಳೆ ಅಬ್ದುಲ್ ರೆಹಮಾನ್ ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಬ್ದುಲ್ ರೆಹಮಾನ್ ಮೃತಪಟ್ಟಿದ್ದರು. ಅವರೊಂದಿಗೆ ಇದ್ದ ಕಲಂದರ್ ಶಫಿ ಅವರ ಮೇಲೂ ಹಲ್ಲೆ ನಡೆದಿತ್ತು. ಪ್ರಕರಣ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತನಿಖೆಗೊಳಪಟ್ಟಿದೆ.
ಪ್ರಕರಣದ ತನಿಖೆಯ ಭಾಗವಾಗಿ ಇದೀಗ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ನೋಟಿಸ್ ನೀಡಲಾಗಿದ್ದು, ಅವರಿಂದ ತನಿಖಾಧಿಕಾರಿಗಳು ಮಾಹಿತಿ ಪಡೆಯಲಿದ್ದಾರೆ. ನೋಟಿಸ್ ನೀಡಿರುವುದಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಿಂದ ಹೆಚ್ಚಿನ ವಿವರಗಳು ತಕ್ಷಣಕ್ಕೆ ಬಹಿರಂಗವಾಗಿಲ್ಲ.
ವಿಎಚ್‌ಪಿ ಮುಖಂಡ ಶರಣ್ ಪಂಪ್‌ವೆಲ್ ಆಕ್ರೋಶ:

ಪ್ರಭಾಕರ್ ಭಟ್ ಅವರಿಗೆ ನೋಟಿಸ್ ನೀಡಿರುವ ಕ್ರಮಕ್ಕೆ ವಿಹೆಚ್‌ಪಿ ಮುಖಂಡ ಶರಣ್ ಪಂಪ್‌ವೆಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಬ್ದುಲ್ ರೆಹಮಾನ್ ಹತ್ಯೆಗೂ ಪ್ರಭಾಕರ್ ಭಟ್ ಅವರಿಗೂ ಏನು ಸಂಬಂಧ ಎಂದು ಪ್ರಶ್ನಿಸಿರುವ ಅವರು, ಕಾಂಗ್ರೆಸ್ ಸರ್ಕಾರ ರಾಜಕೀಯ ಪ್ರೇರಿತವಾಗಿ ಹಿಂದೂ ಸಂಘಟನೆಗಳನ್ನು ಗುರಿಯಾಗಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಯಾರನ್ನೋ ಮೆಚ್ಚಿಸಲು ಹಿಂದೂ ಸಂಘಟನೆಗಳ ಮುಖಂಡರನ್ನು ಗುರಿಯಾಗಿಸಲಾಗುತ್ತಿದೆ. ರಾಷ್ಟ್ರದ ಹಿತಕ್ಕಾಗಿ ಸಂಘಟನೆಗಳು ಕೆಲಸ ಮಾಡುತ್ತಿದ್ದು, ಸಂಘಟನೆಗಳನ್ನು ಮುಗಿಸುವ ಪ್ರಯತ್ನ ನಡೆದರೆ ಹಿಂದೂ ಬಾಂಧವರು ಉತ್ತರಿಸಲಿದ್ದಾರೆ ಎಂದು ಶರಣ್ ಪಂಪ್‌ವೆಲ್ ಹೇಳಿಕೆ ನೀಡಿದ್ದಾರೆ.
ಇದೀಗ ಪ್ರಭಾಕರ್ ಭಟ್ ಅವರ ವಿಚಾರಣೆ ಬಳಿಕ ತನಿಖೆಯಲ್ಲಿ ಯಾವ ಅಂಶಗಳು ಬೆಳಕಿಗೆ ಬರಲಿವೆ ಎಂಬುದು ಕುತೂಹಲ ಮೂಡಿಸಿದೆ.