


ಡೈಲಿವಾರ್ತೆ:01/ಅ./2026

ಪಡಿತರ ಚೀಟಿದಾರರಿಗೆ ಗುಡ್‌ನ್ಯೂಸ್: ಮನೆಯಲ್ಲೇ ಇ-ಕೆವೈಸಿಗೆ ಸರ್ಕಾರದಿಂದ ‘ಅನ್ನಸೇವೆ’ ಆ್ಯಪ್ ಬಿಡುಗಡೆ, ಸರತಿ ಸಾಲಿಗೆ ಬ್ರೇಕ್ – ಮೊದಲ ಹಂತದಲ್ಲಿ 8 ಜಿಲ್ಲೆಗಳಲ್ಲಿ ಸೇವೆ

ಬೆಂಗಳೂರು: ಪಡಿತರ ಚೀಟಿದಾರರು ಇ-ಕೆವೈಸಿ ಮಾಡಿಸಿಕೊಳ್ಳಲು ಪಡಿತರ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ‘ಅನ್ನಸೇವೆ’ ಎಂಬ ಹೊಸ ಮೊಬೈಲ್ ಆ್ಯಪ್‌ನ್ನು ಪರಿಚಯಿಸಿದೆ.
ಇನ್ನು ಮುಂದೆ ಆಯ್ದ ಜಿಲ್ಲೆಗಳ ಫಲಾನುಭವಿಗಳು ಮನೆಯಿಂದಲೇ ಮೊಬೈಲ್ ಮೂಲಕ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದಾಗಿದೆ. ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಹಾವೇರಿ, ಕಾರವಾರ, ಬಳ್ಳಾರಿ, ಬೀದರ್ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಆ್ಯಪ್ ಸೇವೆ ಆರಂಭಿಸಲಾಗಿದೆ.
ಇ-ಕೆವೈಸಿ ಪ್ರಕ್ರಿಯೆಗೆ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಏಕಕಾಲದಲ್ಲಿ ಮುಂದಾಗಿದ್ದರಿಂದ ಸರ್ವರ್ ಸಮಸ್ಯೆ ಎದುರಾಗಿತ್ತು. ಪರಿಣಾಮವಾಗಿ ಪಡಿತರ ಅಂಗಡಿಗಳಲ್ಲಿ ಜನರು ದೀರ್ಘಕಾಲ ಸರತಿ ಸಾಲಿನಲ್ಲಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಮಸ್ಯೆ ನಿವಾರಿಸುವ ಉದ್ದೇಶದಿಂದಲೇ ಆ್ಯಪ್ ಆಧಾರಿತ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಇಲಾಖೆ ತಿಳಿಸಿದೆ.
ಮುಂದಿನ ಸುಮಾರು 20 ದಿನಗಳಲ್ಲಿ ಪ್ರಾಯೋಗಿಕ ಹಂತದ ಪರಿಶೀಲನೆ ಪೂರ್ಣಗೊಳಿಸಿ, ‘ಅನ್ನಸೇವೆ’ ಆ್ಯಪ್‌ನ್ನು ರಾಜ್ಯದ ಎಲ್ಲಾ 31 ಜಿಲ್ಲೆಗಳಿಗೂ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ.
ಈ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಮಾತನಾಡಿ, ಇ-ಕೆವೈಸಿ ನವೀಕರಣಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಆದರೆ ಏಕಕಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಪ್ರಕ್ರಿಯೆಗೆ ಮುಂದಾದ ಹಿನ್ನೆಲೆಯಲ್ಲಿ ಸರ್ವರ್ ಸಮಸ್ಯೆ ಉಂಟಾಗಿದೆ. ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಸುಮಾರು 4.5 ಕೋಟಿ ಫಲಾನುಭವಿಗಳಿದ್ದು, ಅವರಿಗೆ ಯಾವುದೇ ತೊಂದರೆಯಾಗದಂತೆ ಇ-ಕೆವೈಸಿ ಸೇವೆ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ. ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿ ಜನರಿಗೆ ಸುಗಮವಾಗಿ ಸೇವೆ ದೊರೆಯುವಂತೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.