


ಡೈಲಿವಾರ್ತೆ:01/ಅ./2026

ಭಾರತ-ಪಾಕಿಸ್ತಾನ ಫೈನಲ್‌ಗೆ ವೇದಿಕೆ ಸಜ್ಜು!
ಅಕ್ಟೋಬರ್ 3ರಂದು ಇಂಡೊ–ಪಾಕ್ ಕದನ; ಚಿನ್ನಕ್ಕಾಗಿ ಜಿದ್ದಾಜಿದ್ದಿನ ಸೆಣಸಾಟ

ನವದೆಹಲಿ: ಏಷ್ಯನ್ ಗೇಮ್ಸ್‌ನ ಪುರುಷರ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ನಿರೀಕ್ಷೆಯಂತೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಫೈನಲ್ ಪ್ರವೇಶಿಸಿದ್ದು, ಅಕ್ಟೋಬರ್ 3ರಂದು ನಡೆಯಲಿರುವ ಮಹತ್ವದ ಪ್ರಶಸ್ತಿ ಕಾಳಗಕ್ಕೆ ವೇದಿಕೆ ಸಿದ್ಧವಾಗಿದೆ.
ಮೊದಲ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 6 ವಿಕೆಟ್‌ಗಳ ಗೆಲುವು ದಾಖಲಿಸಿದ ಪಾಕಿಸ್ತಾನ ಫೈನಲ್‌ಗೆ ಲಗ್ಗೆ ಇಟ್ಟರೆ, ಎರಡನೇ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ 124 ರನ್‌ಗಳ ಭರ್ಜರಿ ಜಯ ಸಾಧಿಸಿದ ಭಾರತ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದೆ.
ಸಾಂಪ್ರದಾಯಿಕ ಎದುರಾಳಿಗಳಾದ ಭಾರತ–ಪಾಕಿಸ್ತಾನ ತಂಡಗಳು ಮತ್ತೊಮ್ಮೆ ಪ್ರಶಸ್ತಿಗಾಗಿ ಮುಖಾಮುಖಿಯಾಗುತ್ತಿರುವುದರಿಂದ ಅಕ್ಟೋಬರ್ 3ರ ಪಂದ್ಯ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ.
ಬೆಳಗ್ಗೆ 10ಕ್ಕೆ ಪಂದ್ಯ ಆರಂಭ:
ಭಾರತ–ಪಾಕಿಸ್ತಾನ ನಡುವಣ ಫೈನಲ್ ಪಂದ್ಯ ಅಕ್ಟೋಬರ್ 3ರಂದು ಭಾರತೀಯ ಕಾಲಮಾನ ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದೆ. ಬೆಳಗ್ಗೆ 9.30ಕ್ಕೆ ಟಾಸ್ ನಡೆಯಲಿದೆ.
ಜಪಾನ್‌ನ ನಿಶ್ಶಿನ್‌ನಲ್ಲಿರುವ ಕೊರೊಗಿ ಸ್ಪೋರ್ಟ್ಸ್ ಪಾರ್ಕ್ ಕ್ರಿಕೆಟ್ ಮೈದಾನ ಈ ಮಹತ್ವದ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.
ಸೋನಿ ಸ್ಪೋರ್ಟ್ಸ್‌ನಲ್ಲಿ ನೇರ ಪ್ರಸಾರ
ಭಾರತ–ಪಾಕಿಸ್ತಾನ ಫೈನಲ್ ಪಂದ್ಯವನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರವಾಗಿ ವೀಕ್ಷಿಸಬಹುದಾಗಿದೆ.
ಕನ್ನಡ, ತಮಿಳು, ತೆಲುಗು: ಸೋನಿ ಸ್ಪೋರ್ಟ್ಸ್ 4, ಇಂಗ್ಲಿಷ್: ಸೋನಿ ಸ್ಪೋರ್ಟ್ಸ್ 1, ಸೋನಿ ಸ್ಪೋರ್ಟ್ಸ್ 5
ಹಿಂದಿ: ಸೋನಿ ಸ್ಪೋರ್ಟ್ಸ್ 3
ಮೊಬೈಲ್, ಲ್ಯಾಪ್‌ಟಾಪ್ ಹಾಗೂ ಸ್ಮಾರ್ಟ್ ಟಿವಿಯಲ್ಲಿ ಸೋನಿ LIV ಆ್ಯಪ್ ಅಥವಾ ವೆಬ್‌ಸೈಟ್ ಮೂಲಕವೂ ಪಂದ್ಯವನ್ನು ಲೈವ್ ವೀಕ್ಷಿಸಬಹುದು.
ಚಿನ್ನ ಯಾರಿಗೆ?
ಫೈನಲ್‌ಗೆ ಪ್ರವೇಶಿಸಿರುವ ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳಿಗೆ ಪದಕ ಖಚಿತವಾಗಿದೆ. ಫೈನಲ್‌ನಲ್ಲಿ ಗೆಲುವು ಸಾಧಿಸುವ ತಂಡ ಚಿನ್ನದ ಪದಕಕ್ಕೆ ಮುತ್ತಿಡಲಿದ್ದು, ಸೋಲುವ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಗುತ್ತದೆ.
ಭಾರತದ ತಂಡ
ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ರವಿ ಬಿಷ್ಣೋಯಿ, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಜಸ್ಪ್ರೀತ್ ಬುಮ್ರಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಯಶ್ ಠಾಕೂರ್, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವಿಪ್ರಾಜ್ ನಿಗಮ್ ಹಾಗೂ ವೈಭವ್ ಸೂರ್ಯವಂಶಿ.
ಪಾಕಿಸ್ತಾನದ ತಂಡ
ಸಾಹಿಬ್‌ಝಾದ ಫರ್ಹಾನ್ (ನಾಯಕ), ಅಬ್ದುಲ್ ಸಮದ್ (ಉಪನಾಯಕ), ಸೈಮ್ ಅಯೂಬ್, ಹೈದರ್ ಅಲಿ, ಹಸನ್ ನವಾಝ್, ಸಾದ್ ಮಸೂದ್, ಉಸ್ಮಾನ್ ಖಾನ್ (ವಿಕೆಟ್ ಕೀಪರ್), ಅರಾಫತ್ ಮಿನ್ಹಾಸ್, ಮಾಝ್ ಸದಾಕತ್, ಅಬ್ರಾರ್ ಅಹ್ಮದ್, ಸುಫ್ಯಾನ್ ಮುಖೀಮ್, ಅಹ್ಮದ್ ದಾನಿಯಾಲ್, ಆಕಿಫ್ ಜಾವೇದ್, ಅಲಿ ರಾಝ ಹಾಗೂ ಮೊಹಮ್ಮದ್ ಸಲ್ಮಾನ್ ಮಿರ್ಝ.
ಚಿನ್ನದ ಪದಕಕ್ಕಾಗಿ ಭಾರತ–ಪಾಕಿಸ್ತಾನ ಕದನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅಕ್ಟೋಬರ್ 3ರಂದು ನಡೆಯಲಿರುವ ಈ ಪಂದ್ಯ ಮತ್ತೊಂದು ರೋಚಕ ಇಂಡೊ–ಪಾಕ್ ಮುಖಾಮುಖಿಗೆ ಸಾಕ್ಷಿಯಾಗಲಿದೆ.