ಡೈಲಿವಾರ್ತೆ:01/ಅ./2026

ಕಾಕ್‌ಪಿಟ್‌ನಲ್ಲೇ ರಕ್ತಸಿಕ್ತ ಕಾಳಗ: 174 ಜೀವ ಉಳಿಸಿದ ಭಾರತೀಯ ಕ್ಯಾಪ್ಟನ್!
ಸಹ-ಪೈಲಟ್‌ನಿಂದ ಚಾಕು ದಾಳಿ – ವಿಮಾನ ಪತನದ ಸಂಚು ಶಂಕೆ? ತಬೂಕ್‌ನಲ್ಲಿ ತುರ್ತು ಲ್ಯಾಂಡಿಂಗ್

ನವದೆಹಲಿ/ಟೆಲ್ ಅವಿವ್: 34 ಸಾವಿರ ಅಡಿ ಎತ್ತರದಲ್ಲಿ ಸಾಗುತ್ತಿದ್ದ ವಿಮಾನ. ಇನ್ನೇನು ಕೆಲವೇ ಕ್ಷಣಗಳಲ್ಲಿ ಕಾಕ್‌ಪಿಟ್‌ನಲ್ಲಿನ ಸಂಘರ್ಷ ಭೀಕರ ದುರಂತಕ್ಕೆ ಕಾರಣವಾಗುವ ಸಾಧ್ಯತೆ. ಸಹ-ಪೈಲಟ್‌ನ ಮಾರಣಾಂತಿಕ ದಾಳಿಯಿಂದ ರಕ್ತಸಿಕ್ತರಾದರೂ ಎದೆಗುಂದದ ಭಾರತೀಯ ಕ್ಯಾಪ್ಟನ್‌ರ ಸಮಯಪ್ರಜ್ಞೆ ಹಾಗೂ ಪ್ರಯಾಣಿಕರ ತ್ವರಿತ ಪ್ರತಿಕ್ರಿಯೆಯಿಂದ 174 ಮಂದಿ ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ನಡೆದಿದೆ.

ದುಬೈಯಿಂದ ಟೆಲ್ ಅವಿವ್‌ಗೆ ತೆರಳುತ್ತಿದ್ದ ಫ್ಲೈದುಬೈ ಸಂಸ್ಥೆಯ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನದಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ. ವಿಮಾನದ ಮುಖ್ಯ ಪೈಲಟ್ ಆಗಿದ್ದ ಭಾರತೀಯ ಪ್ರಜೆ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರು ಸಹ-ಪೈಲಟ್‌ನಿಂದ ಚಾಕು ದಾಳಿಗೆ ಒಳಗಾದರೂ ವಿಮಾನದ ನಿಯಂತ್ರಣ ಕಳೆದುಕೊಳ್ಳದಂತೆ ಹೋರಾಡಿದ್ದಾರೆ ಎನ್ನಲಾಗಿದೆ.

ಎರಡು ಗಂಟೆಗಳ ಬಳಿಕ ಕಾಕ್‌ಪಿಟ್‌ನಲ್ಲಿ ಕಾಳಗ:
174 ಪ್ರಯಾಣಿಕರನ್ನು ಹೊತ್ತ ವಿಮಾನ ದುಬೈನಿಂದ ಟೇಕ್‌ಆಫ್ ಆದ ಸುಮಾರು ಎರಡು ಗಂಟೆಗಳ ಬಳಿಕ ಕಾಕ್‌ಪಿಟ್‌ನಲ್ಲಿ ಇಬ್ಬರು ಪೈಲಟ್‌ಗಳ ನಡುವೆ ತೀವ್ರ ಸಂಘರ್ಷ ಆರಂಭವಾಗಿದೆ. ಓಮನ್ ಪ್ರಜೆಯಾಗಿರುವ ಸಹ-ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ ಎಂದು ವರದಿಯಾಗಿದೆ.

ದಾಳಿಯಲ್ಲಿ ಕ್ಯಾಪ್ಟನ್ ಗಂಭೀರವಾಗಿ ಗಾಯಗೊಂಡು ರಕ್ತಸಿಕ್ತರಾದರೂ, ಪರಿಸ್ಥಿತಿಯನ್ನು ನಿಭಾಯಿಸಿ ವಿಮಾನದ ನಿಯಂತ್ರಣವನ್ನು ಕಾಪಾಡಿಕೊಳ್ಳಲು ಅವರು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಕಾಕ್‌ಪಿಟ್‌ನಿಂದ ಕೇಳಿಬಂದ ಚೀರಾಟ ಮತ್ತು ಗಲಾಟೆಯಿಂದ ಎಚ್ಚೆತ್ತ ಸಿಬ್ಬಂದಿ ತಕ್ಷಣ ಅಲ್ಲಿಗೆ ಧಾವಿಸಿದ್ದಾರೆ.
ಕಾಕ್‌ಪಿಟ್‌ಗೆ ನುಗ್ಗಿದ ಪ್ರಯಾಣಿಕರು
ಕ್ಯಾಪ್ಟನ್‌ನ ಕಿರುಚಾಟ ಕೇಳಿದ ಮಹಿಳಾ ಪ್ರಯಾಣಿಕರೊಬ್ಬರು ಕಾಕ್‌ಪಿಟ್‌ ಬಳಿ ತೆರಳಿದಾಗ ಒಳಗೆ ರಕ್ತದ ಕಲೆಗಳು ಕಂಡುಬಂದಿವೆ ಎನ್ನಲಾಗಿದೆ. ಅವರು ತಕ್ಷಣ ಸಹಾಯಕ್ಕಾಗಿ ಇತರರನ್ನು ಕರೆದಿದ್ದಾರೆ.
ಮುಂಭಾಗದ ಆಸನಗಳಲ್ಲಿದ್ದ ಕೆಲವು ಇಸ್ರೇಲಿ ಪ್ರಯಾಣಿಕರು ಕೂಡಲೇ ಕಾಕ್‌ಪಿಟ್‌ಗೆ ನುಗ್ಗಿ ದಾಳಿ ನಡೆಸುತ್ತಿದ್ದ ಸಹ-ಪೈಲಟ್‌ನನ್ನು ಹಿಡಿದು ನಿಯಂತ್ರಣಕ್ಕೆ ತಂದಿದ್ದಾರೆ. ಇದೇ ವೇಳೆ ವಿಮಾನದಲ್ಲೇ ಪ್ರಯಾಣಿಸುತ್ತಿದ್ದ ಇಬ್ಬರು ಆಫ್-ಡ್ಯೂಟಿ ಪೈಲಟ್‌ಗಳು ಪರಿಸ್ಥಿತಿಯನ್ನು ನಿಭಾಯಿಸಲು ಮುಂದಾಗಿದ್ದಾರೆ.
ತಬೂಕ್‌ನಲ್ಲಿ ತುರ್ತು ಲ್ಯಾಂಡಿಂಗ್
ವಿಮಾನವನ್ನು ಸುರಕ್ಷಿತವಾಗಿ ನಿಯಂತ್ರಣಕ್ಕೆ ಪಡೆದುಕೊಂಡ ಬಳಿಕ ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ ವಿಮಾನದಲ್ಲಿದ್ದ ಇಸ್ರೇಲಿ ದಂತವೈದ್ಯರೊಬ್ಬರು ತಕ್ಷಣ ಪ್ರಥಮ ಚಿಕಿತ್ಸೆ ನೀಡಿ ರಕ್ತಸ್ರಾವ ನಿಯಂತ್ರಿಸಲು ನೆರವಾಗಿದ್ದಾರೆ ಎಂದು ವರದಿಯಾಗಿದೆ.

ಬಳಿಕ ಇಬ್ಬರು ಪೈಲಟ್‌ಗಳನ್ನೂ ತಬೂಕ್‌ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಇತರ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಫ್ಲೈದುಬೈ ತಿಳಿಸಿದೆ.
ಸ್ಪೈಸ್‌ಜೆಟ್‌ನಲ್ಲಿ ದಶಕದ ಸೇವೆ
ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರು ಈ ಹಿಂದೆ ಭಾರತ ಮೂಲದ ಸ್ಪೈಸ್‌ಜೆಟ್‌ನಲ್ಲಿ ಸುಮಾರು ಒಂದು ದಶಕದ ಕಾಲ ಪೈಲಟ್ ಆಗಿ ಸೇವೆ ಸಲ್ಲಿಸಿದ್ದರು ಎನ್ನಲಾಗಿದೆ. 2022ರಲ್ಲಿ ಯುಎಇ ಮೂಲದ ಫ್ಲೈದುಬೈ ಸಂಸ್ಥೆಗೆ ಸೇರ್ಪಡೆಯಾಗಿದ್ದರು ಎಂದು ಅವರ ಸಹೋದ್ಯೋಗಿಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ.

ಭದ್ರತಾ ಲೋಪದ ಬಗ್ಗೆಯೂ ತನಿಖೆ
ಘಟನೆಯ ಬೆನ್ನಲ್ಲೇ ಸಹ-ಪೈಲಟ್‌ನ ಹಿನ್ನೆಲೆ ಮತ್ತು ಆತನಿಗೆ ಇಸ್ರೇಲ್‌ಗೆ ತೆರಳುವ ವಿಮಾನದಲ್ಲಿ ಕಾರ್ಯನಿರ್ವಹಿಸಲು ಅನುಮತಿ ದೊರೆತಿರುವ ಕುರಿತು ಭದ್ರತಾ ಸಂಸ್ಥೆಗಳು ತನಿಖೆ ಆರಂಭಿಸಿವೆ.
ಇಸ್ರೇಲ್‌ ವಾಯುಪ್ರದೇಶಕ್ಕೆ ಪ್ರವೇಶಿಸುವ ವಿಮಾನಗಳ ಸಿಬ್ಬಂದಿಗೆ ಕಠಿಣ ಭದ್ರತಾ ಪರಿಶೀಲನೆ ನಡೆಯುವ ಹಿನ್ನೆಲೆಯಲ್ಲಿ, ಒಂದು ವರ್ಷಕ್ಕಿಂತ ಕಡಿಮೆ ಅವಧಿಯಿಂದ ಫ್ಲೈದುಬೈನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಹ-ಪೈಲಟ್‌ಗೆ ಇಂತಹ ವಿಮಾನದಲ್ಲಿ ಕರ್ತವ್ಯ ನಿರ್ವಹಿಸಲು ಹೇಗೆ ಅನುಮತಿ ದೊರೆಯಿತು ಎಂಬ ಪ್ರಶ್ನೆಯೂ ತನಿಖೆಯ ಕೇಂದ್ರವಾಗಿದೆ.
ವಿಮಾನವನ್ನು ಉದ್ದೇಶಪೂರ್ವಕವಾಗಿ ಅಪಘಾತಕ್ಕೀಡುಮಾಡುವ ಪ್ರಯತ್ನ ನಡೆದಿತ್ತೇ ಎಂಬ ಆಯಾಮದಲ್ಲಿಯೂ ಸೌದಿ ಹಾಗೂ ಇಸ್ರೇಲ್ ಭದ್ರತಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಫ್ಲೈದುಬೈ ಕೂಡ ಪ್ರತ್ಯೇಕ ಆಂತರಿಕ ತನಿಖೆಗೆ ಆದೇಶಿಸಿದೆ.
ತಬೂಕ್‌ನಲ್ಲಿ ಇಳಿದಿದ್ದ ಪ್ರಯಾಣಿಕರನ್ನು ಟೆಲ್ ಅವಿವ್‌ಗೆ ಕರೆದೊಯ್ಯಲು ಪರ್ಯಾಯ ವಿಮಾನ ವ್ಯವಸ್ಥೆ ಮಾಡಲಾಗಿದೆ. ಕಾಕ್‌ಪಿಟ್‌ನೊಳಗಿನ ಕೆಲವೇ ನಿಮಿಷಗಳ ಸಂಘರ್ಷವು ದೊಡ್ಡ ವಾಯು ದುರಂತವಾಗಿ ಮಾರ್ಪಡುವ ಮುನ್ನ ತಡೆಯಲ್ಪಟ್ಟಿರುವ ಈ ಘಟನೆ ಇದೀಗ ವಿಮಾನಯಾನ ಭದ್ರತೆಯ ಕುರಿತಂತೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.