ಡೈಲಿವಾರ್ತೆ:01/ಅ./2026

ಕಾಕ್‌ಪಿಟ್‌ನಲ್ಲಿ ಪೈಲಟ್‌ಗೆ ಚಾಕು ಇರಿತ: 34 ಸಾವಿರ ಅಡಿ ಎತ್ತರದಲ್ಲಿ ನಿಯಂತ್ರಣ ಕಳೆದುಕೊಂಡ ವಿಮಾನ! ಏರ್ ಕ್ರ್ಯಾಶ್’ ಜ್ಞಾನದಿಂದ ನೂರಾರು ಜೀವ ಉಳಿಸಿದ ಪ್ರಯಾಣಿಕ

ಟೆಲ್ ಅವೀವ್, ಅ.1: ಪೈಲಟ್‌ಗಳ ನಡುವಿನ ಘರ್ಷಣೆಯಿಂದ ವಿಮಾನವೊಂದು ಏಕಾಏಕಿ ನಿಯಂತ್ರಣ ಕಳೆದುಕೊಂಡು ಕೆಳಮುಖವಾಗಿ ಚಲಿಸಲಾರಂಭಿಸಿದ ವೇಳೆ, ವಿಮಾನ ಅಪಘಾತಗಳ ತನಿಖೆ ಕುರಿತ ಟಿವಿ ಕಾರ್ಯಕ್ರಮವನ್ನು ನಿಯಮಿತವಾಗಿ ವೀಕ್ಷಿಸುತ್ತಿದ್ದ ಪ್ರಯಾಣಿಕನೊಬ್ಬ ತನ್ನ ತಿಳುವಳಿಕೆಯನ್ನು ಬಳಸಿಕೊಂಡು ತುರ್ತು ಪರಿಸ್ಥಿತಿಯಲ್ಲಿ ಮಧ್ಯಪ್ರವೇಶಿಸಿ ಭಾರಿ ಅನಾಹುತವೊಂದನ್ನು ತಪ್ಪಿಸಲು ನೆರವಾದ ಘಟನೆ ವರದಿಯಾಗಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಇಸ್ರೇಲ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ. ವಿಮಾನ ಹಾರಾಟದಲ್ಲಿದ್ದ ವೇಳೆ ಒಬ್ಬ ಪೈಲಟ್ ಮತ್ತೊಬ್ಬ ಪೈಲಟ್‌ಗೆ ಚಾಕುವಿನಿಂದ ಇರಿದ ಪರಿಣಾಮ ಕಾಕ್‌ಪಿಟ್‌ನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಇದೇ ವೇಳೆ ವಿಮಾನ ತನ್ನ ನಿಯಂತ್ರಣ ಕಳೆದುಕೊಂಡು ತೀವ್ರವಾಗಿ ಕೆಳಮುಖವಾಗಿ ಚಲಿಸಲಾರಂಭಿಸಿತ್ತು. ಕೇವಲ ಒಂದು ನಿಮಿಷದ ಅವಧಿಯಲ್ಲಿ ವಿಮಾನವು ತನ್ನ ಹಾರಾಟದ ಎತ್ತರದ ಅರ್ಧದಷ್ಟು ಭಾಗವನ್ನು ಕಳೆದುಕೊಂಡಿತ್ತು ಎಂದು ವರದಿಯಾಗಿದೆ.

ಪರಿಸ್ಥಿತಿ ಕೈಮೀರುವುದನ್ನು ಅರಿತ ಪ್ರಯಾಣಿಕ ಯಾನೀವ್ ಹಯೂನ್ ಸೇರಿದಂತೆ ಕೆಲವರು ಕಾಕ್‌ಪಿಟ್‌ಗೆ ಪ್ರವೇಶಿಸಲು ಮುಂದಾದರು. ಗಾಯಗೊಂಡ ಪೈಲಟ್ ಕಾಕ್‌ಪಿಟ್ ಬಾಗಿಲಿನ ಬಳಿ ಬಿದ್ದಿದ್ದರಿಂದ ಒಳನುಗ್ಗುವುದು ಸುಲಭವಾಗಿರಲಿಲ್ಲ. ಕೊನೆಗೆ ಕಾಕ್‌ಪಿಟ್ ಪ್ರವೇಶಿಸಿದಾಗ, ಪೈಲಟ್‌ಗಳಿಬ್ಬರೂ ತಮ್ಮ ಆಸನಗಳಲ್ಲಿ ಇರಲಿಲ್ಲ. ಒಬ್ಬರು ನೆಲದ ಮೇಲೆ ಬಿದ್ದಿದ್ದರೆ, ಮತ್ತೊಬ್ಬರು ನಿಯಂತ್ರಣ ಫಲಕದ ಸಮೀಪದಲ್ಲಿದ್ದರು.
ದಾಳಿಕೋರ ವಿಮಾನದ ನಿಯಂತ್ರಣ ವ್ಯವಸ್ಥೆಯನ್ನು ಹಾನಿಗೊಳಿಸಲು ಅಥವಾ ವಿಮಾನದ ಕಾರ್ಯಾಚರಣೆಯನ್ನು ಅಸ್ತವ್ಯಸ್ತಗೊಳಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಹಯೂನ್ ಹಾಗೂ ಇತರರು ಆತನನ್ನು ಹಿಡಿದು ಕಾಕ್‌ಪಿಟ್‌ನಿಂದ ಹೊರಗೆಳೆದು ನಿಯಂತ್ರಣಕ್ಕೆ ತಂದರು. ಬಳಿಕ ವಿಮಾನದ ನಿಯಂತ್ರಣವನ್ನು ಮರಳಿ ಪಡೆಯಲು ಮತ್ತೆ ಕಾಕ್‌ಪಿಟ್‌ಗೆ ತೆರಳಿ ಸಿಬ್ಬಂದಿಗೆ ನೆರವಾದರು.

ವಿಮಾನ ಕೆಳಮುಖವಾಗಿತ್ತು, ಸಮಯ ಕಳೆದುಕೊಳ್ಳುವಂತಿರಲಿಲ್ಲ:
ಘಟನೆಯ ಕುರಿತು ಮಾತನಾಡಿರುವ ಹಯೂನ್, ಕಾಕ್‌ಪಿಟ್ ಪ್ರವೇಶಿಸಿದ ಕ್ಷಣದಲ್ಲಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿತ್ತು ಎಂದು ತಿಳಿಸಿದ್ದಾರೆ. ದಾಳಿಕೋರನನ್ನು ಹಿಡಿದು ಹೊರಗೆಳೆದು ಕಳುಹಿಸುವಷ್ಟರಲ್ಲಿ ವಿಮಾನದ ಮುಂಭಾಗ ಕೆಳಮುಖವಾಗಿತ್ತು. ತಕ್ಷಣವೇ ವಿಮಾನದ ನಿಯಂತ್ರಣವನ್ನು ಮರಳಿ ಪಡೆಯಬೇಕಾದ ಅನಿವಾರ್ಯತೆ ಎದುರಾಗಿತ್ತು ಎಂದು ಅವರು ಹೇಳಿದ್ದಾರೆ.

ತುರ್ತು ಪರಿಸ್ಥಿತಿಯಲ್ಲಿ ವಿಮಾನದ ನಿಯಂತ್ರಣ ಹೇಗೆ ಮರಳಿ ಪಡೆಯಬೇಕು ಎಂಬ ಬಗ್ಗೆ ನನಗೆ ಸ್ವಲ್ಪ ಅರಿವಿತ್ತು. ನಾನು ವಿಮಾನ ಅಪಘಾತಗಳ ತನಿಖೆ ಕುರಿತ ‘ಏರ್ ಕ್ರ್ಯಾಶ್ ಇನ್ವೆಸ್ಟಿಗೇಷನ್’ ಕಾರ್ಯಕ್ರಮವನ್ನು ನಿಯಮಿತವಾಗಿ ವೀಕ್ಷಿಸುತ್ತೇನೆ. ಅದರಲ್ಲಿ ಅಪಘಾತಗಳಿಗೆ ಕಾರಣವಾಗುವ ಅಂಶಗಳು ಹಾಗೂ ಇಂತಹ ಸಂದರ್ಭಗಳಲ್ಲಿ ವಿಮಾನವನ್ನು ಹೇಗೆ ನಿಯಂತ್ರಣಕ್ಕೆ ತರಲಾಗುತ್ತದೆ ಎಂಬುದನ್ನು ವಿವರಿಸುತ್ತಾರೆ. ಆ ಕಾರ್ಯಕ್ರಮದಿಂದ ದೊರೆತಿದ್ದ ತಿಳುವಳಿಕೆ ಈ ಸಂದರ್ಭದಲ್ಲಿ ನನಗೆ ನೆರವಾಯಿತು ಎಂದು ಹಯೂನ್ ಹೇಳಿದ್ದಾರೆ.
ವಿಮಾನವನ್ನು ತಕ್ಷಣ ನಿಯಂತ್ರಣಕ್ಕೆ ತರದಿದ್ದರೆ ಪರಿಸ್ಥಿತಿ ಮತ್ತಷ್ಟು ಭೀಕರವಾಗಬಹುದಿತ್ತು ಎಂದು ಅವರು ತಿಳಿಸಿದ್ದಾರೆ. ವಿಮಾನ ಇಸ್ರೇಲ್ ವಾಯುಪ್ರದೇಶವನ್ನು ತಲುಪುವ ವೇಳೆಗೆ ಪರಿಸ್ಥಿತಿ ದುರಂತಕ್ಕೆ ತಿರುಗುವ ಸಾಧ್ಯತೆಯಿತ್ತು ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಘಟನೆಯ ಬಳಿಕ ವಿಮಾನದ ಮಾರ್ಗವನ್ನು ಬದಲಿಸಲಾಗಿದ್ದು, ಸೌದಿ ಅರೇಬಿಯಾದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಯಿತು. ಘಟನೆಯಿಂದ ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ತೀವ್ರ ಆತಂಕಕ್ಕೆ ಒಳಗಾದರೂ, ಸಮಯೋಚಿತ ಮಧ್ಯಪ್ರವೇಶದಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

ರಕ್ತದ ಕಲೆಗಳಿದ್ದ ಬಟ್ಟೆಯಲ್ಲೇ ಪ್ರಧಾನಿ ಭೇಟಿ:
ಘಟನೆಯಲ್ಲಿ ಪ್ರಮುಖವಾಗಿ ಮಧ್ಯಪ್ರವೇಶಿಸಿದ್ದ ಯಾನೀವ್ ಹಯೂನ್ ಅವರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಟೆಲ್ ಅವಿವ್ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿ ಅಭಿನಂದಿಸಿದರು.
ಪ್ರಧಾನಿ ಕಚೇರಿ ಬಿಡುಗಡೆ ಮಾಡಿರುವ ವೀಡಿಯೊದಲ್ಲಿ, ಹಯೂನ್ ಅವರ ಬಟ್ಟೆಗಳ ಮೇಲೆ ಇನ್ನೂ ರಕ್ತದ ಕಲೆಗಳು ಕಾಣಿಸಿಕೊಂಡಿವೆ. ಈ ಬಗ್ಗೆ ಹಯೂನ್ ಕ್ಷಮೆಯಾಚಿಸಿದಾಗ, ನೆತನ್ಯಾಹು ಅದನ್ನು ಲೆಕ್ಕಿಸದೆ ಅವರ ಧೈರ್ಯವನ್ನು ಪ್ರಶಂಸಿಸಿದರು.
ನಿಮ್ಮನ್ನು ನೋಡಿದಾಗ ನನಗೆ ಸಿಂಹವೊಂದು ಕಾಣುತ್ತದೆ. ನೀವು ಮಹಾನ್ ವೀರರು. ನೀವು ಮಾಡಿರುವ ಕಾರ್ಯ ನಿಜಕ್ಕೂ ನಂಬಲಾಗದಂತಹದ್ದು. ನೀವು ವಿಮಾನದಲ್ಲಿದ್ದ ಪ್ರಯಾಣಿಕರಷ್ಟೇ ಅಲ್ಲ, ಇನ್ನೂ ಅನೇಕರ ಜೀವವನ್ನು ಉಳಿಸಿದ್ದೀರಿ ಎಂದು ನೆತನ್ಯಾಹು ಮೆಚ್ಚುಗೆ ವ್ಯಕ್ತಪಡಿಸಿದರು.

ಪೈಲಟ್ ಮೇಲೆ ನಡೆದ ದಾಳಿ, ಕ್ಷಣಾರ್ಧದಲ್ಲಿ ನಿಯಂತ್ರಣ ಕಳೆದುಕೊಂಡ ವಿಮಾನ, ಆತಂಕದ ನಡುವೆಯೇ ಕಾಕ್‌ಪಿಟ್‌ಗೆ ನುಗ್ಗಿದ ಪ್ರಯಾಣಿಕರು ಮತ್ತು ಬಳಿಕ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ ಘಟನೆ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.