ಡೈಲಿವಾರ್ತೆ:01/ಅ./2026

MRPL ಸ್ಫೋಟ: ಮೃತ ಗುತ್ತಿಗೆ ಕಾರ್ಮಿಕನ ಕುಟುಂಬಕ್ಕೆ ₹1.20 ಕೋಟಿ ಪರಿಹಾರ –
ಕಾರ್ಮಿಕ ಸಂಘಟನೆಗಳ ಧರಣಿ, ಶಾಸಕ ಉಮಾನಾಥ ಕೋಟ್ಯಾನ್ ಸಂಧಾನ, ಬೇಡಿಕೆಗಳಿಗೆ ಆಡಳಿತ ಮಂಡಳಿ ಸ್ಪಂದನೆ

ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ (MRPL)ನ ಕೋಕರ್ ಹೈಡ್ರೋಟ್ರೀಟರ್ (CHT) ಘಟಕದಲ್ಲಿ ಬುಧವಾರ ಸಂಭವಿಸಿದ ಭೀಕರ ಸ್ಫೋಟಕ್ಕೆ ಬಲಿಯಾದ ಮೂಲ್ಕಿ ಮೂಲದ ಗುತ್ತಿಗೆ ಕಾರ್ಮಿಕ ಮನೀಶ್ ಕರ್ಕಡ ಅವರ ಕುಟುಂಬಕ್ಕೆ ನ್ಯಾಯ ಹಾಗೂ ಗರಿಷ್ಠ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಗುರುವಾರ MRPL ಮುಖ್ಯದ್ವಾರದ ಎದುರು ಬೃಹತ್ ಧರಣಿ ಸತ್ಯಾಗ್ರಹ ನಡೆಸಿದವು.

MRPL-ONGC ಕರ್ಮಚಾರಿ ಸಂಘ ಹಾಗೂ MRPL ಲೇಬರ್ ಯೂನಿಯನ್ ನೇತೃತ್ವದಲ್ಲಿ ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡು, ಅವಘಡದಲ್ಲಿ ಮೃತಪಟ್ಟ ಕಾರ್ಮಿಕನ ಕುಟುಂಬದ ನೆರವಿಗೆ ಆಡಳಿತ ಮಂಡಳಿ ತಕ್ಷಣ ಸ್ಪಂದಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ, MRPL ಆಡಳಿತ ಮಂಡಳಿಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕಾರ್ಮಿಕ ಸಂಘಟನೆಗಳೊಂದಿಗೆ ನೇರವಾಗಿ ಮಾತುಕತೆ ನಡೆಸಬೇಕೆಂದು ಪಟ್ಟುಹಿಡಿದರು.

ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಮಧ್ಯಪ್ರವೇಶಿಸಿ ಆಡಳಿತ ಮಂಡಳಿ ಹಾಗೂ ಕಾರ್ಮಿಕ ಸಂಘಟನೆಗಳ ನಡುವೆ ಸತತ ಮಾತುಕತೆ ನಡೆಸಿದರು. ಹಲವು ಸುತ್ತಿನ ಸಂಧಾನದ ಬಳಿಕ ಕಾರ್ಮಿಕ ಸಂಘಟನೆಗಳ ಪ್ರಮುಖ ಬೇಡಿಕೆಗಳಿಗೆ ಆಡಳಿತ ಮಂಡಳಿ ಸ್ಪಂದಿಸಿದ್ದು, ಮೃತ ಮನೀಶ್ ಕರ್ಕಡ ಅವರ ಕುಟುಂಬಕ್ಕೆ ಒಟ್ಟು ಅಂದಾಜು ₹1.20 ಕೋಟಿ ಆರ್ಥಿಕ ನೆರವು ಹಾಗೂ ವಿಮಾ ಸೌಲಭ್ಯ ಒದಗಿಸಲು ಒಪ್ಪಿಗೆ ನೀಡಿದೆ.

₹90 ಲಕ್ಷ ನೇರ ನೆರವು
MRPL ಆಡಳಿತ ಮಂಡಳಿ ಹೊರಡಿಸಿರುವ ಅಧಿಕೃತ ಪ್ರಕಟಣೆಯ ಪ್ರಕಾರ, ಮೃತ ಮನೀಶ್ ಕರ್ಕಡ ಅವರ ಕುಟುಂಬಕ್ಕೆ ಕಂಪನಿಯ ವತಿಯಿಂದ ನೇರವಾಗಿ ₹90 ಲಕ್ಷ ಆರ್ಥಿಕ ಸಹಾಯಧನ ನೀಡಲಾಗುವುದು. ಇದರೊಂದಿಗೆ ಗ್ರೂಪ್ ಟರ್ಮ್ ಲೈಫ್ ಇನ್ಶೂರೆನ್ಸ್ ಅಡಿಯಲ್ಲಿ ಅಂದಾಜು ₹10 ಲಕ್ಷ ಹಾಗೂ ಕಾರ್ಮಿಕರ ಪರಿಹಾರ ಪಾಲಿಸಿಯಡಿ ಅಂದಾಜು ₹20 ಲಕ್ಷ ದೊರೆಯಲಿದೆ.
ಕಂಪನಿಯ ನೇರ ಆರ್ಥಿಕ ನೆರವು ಹಾಗೂ ವಿವಿಧ ವಿಮಾ ಸೌಲಭ್ಯಗಳನ್ನು ಒಟ್ಟುಗೂಡಿಸಿದರೆ ಮೃತ ಕಾರ್ಮಿಕನ ಕುಟುಂಬಕ್ಕೆ ಒಟ್ಟು ಅಂದಾಜು ₹1.20 ಕೋಟಿ ಪರಿಹಾರ ಲಭ್ಯವಾಗಲಿದೆ ಎಂದು MRPL ತಿಳಿಸಿದೆ.

ಬುಧವಾರದ ಸ್ಫೋಟದಲ್ಲಿ ಗುತ್ತಿಗೆ ಕಾರ್ಮಿಕ ಮನೀಶ್ ಕರ್ಕಡ ಮೃತಪಟ್ಟಿದ್ದು, ಘಟನೆಯ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳು ಹಾಗೂ ಅವಘಡದ ಕಾರಣಗಳ ಕುರಿತು ತನಿಖೆ ನಡೆಯುತ್ತಿರುವ ನಡುವೆಯೇ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ ಮತ್ತು ಪರಿಹಾರಕ್ಕಾಗಿ ಒತ್ತಾಯ ತೀವ್ರಗೊಂಡಿತ್ತು. ಇದೀಗ ಆಡಳಿತ ಮಂಡಳಿ ಪರಿಹಾರ ಘೋಷಿಸಿರುವುದು ಪ್ರತಿಭಟನೆಗೆ ಪ್ರಮುಖ ಬೆಳವಣಿಗೆಯಾಗಿದೆ.