


ಡೈಲಿವಾರ್ತೆ:02/ಅ./2026

ತಂದೆಯಿಂದ ₹90 ಲಕ್ಷ ಸುಲಿಗೆಗೆ ಪುತ್ರನಿಂದಲೇ ಕಿಡ್ನಾಪ್ ನಾಟಕ: ಇಬ್ಬರು ಸಹಚರರು ಸೇರಿ ಮೂವರ ಬಂಧನ

ಬೆಂಗಳೂರು: ಸ್ವಂತ ತಂದೆಯಿಂದ ₹90 ಲಕ್ಷ ಹಣ ಸುಲಿಗೆ ಮಾಡಲು 40 ವರ್ಷದ ಪುತ್ರನೇ ತನ್ನ ಅಪಹರಣದ ನಾಟಕವಾಡಿದ ಪ್ರಕರಣವನ್ನು ಆರ್.ಆರ್.ನಗರ ಠಾಣೆ ಪೊಲೀಸರು ಭೇದಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ರ ಮನೀಷ್ ಪಟೇಲ್ ಹಾಗೂ ಆತನ ಇಬ್ಬರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.
62 ವರ್ಷದ ಮನೋಹರ್ ಪಟೇಲ್ ನೀಡಿದ ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರಿಗೆ ಪುತ್ರನೇ ಅಪಹರಣದ ಸಂಚಿನ ರೂವಾರಿಯಾಗಿರುವುದು ಬಯಲಾಗಿದೆ.
ಗದಗದಲ್ಲಿ ಹಣದ ವ್ಯವಹಾರವಿದೆ ಎಂದು ತಂದೆಗೆ ತಿಳಿಸಿದ್ದ ಮನೀಷ್, ಸೆ.28ರಂದು ಮನೆಯಿಂದ ಹೊರಟಿದ್ದ. ಮರುದಿನ ಬೆಳಗ್ಗೆ 8ರ ಸುಮಾರಿಗೆ ಮನೀಷ್ನ ಮೊಬೈಲ್ ಸಂಖ್ಯೆಯಿಂದ ತಂದೆಗೆ ವಾಟ್ಸ್ಆ್ಯಪ್ ಕರೆ ಬಂದಿತ್ತು. ಕರೆ ಸ್ವೀಕರಿಸಿದಾಗ ಅಪರಿಚಿತರು ನಿಮ್ಮ ಮಗನನ್ನು ಅಪಹರಿಸಿದ್ದೇವೆ. ₹90 ಲಕ್ಷ ನೀಡದಿದ್ದರೆ ಆತನನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು.
ನಾಲ್ಕೈದು ಬಾರಿ ಕರೆ ಮಾಡಿದ ಬಳಿಕ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಇದರಿಂದ ಆತಂಕಗೊಂಡ ಮನೋಹರ್ ಪಟೇಲ್ ಕೂಡಲೇ ಆರ್.ಆರ್.ನಗರ ಠಾಣೆಗೆ ತೆರಳಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೊಬೈಲ್ ಸಂಖ್ಯೆಯ ಜಾಡು ಹಿಡಿಯಲು ಮುಂದಾದಾಗ ಅದು ಸ್ವಿಚ್ ಆಫ್ ಆಗಿತ್ತು. ಕೆಲ ಸಮಯದ ಬಳಿಕ ಮತ್ತೊಂದು ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದ್ದು, ಆರೋಪಿಗಳು ಹಣದ ವ್ಯವಸ್ಥೆಯಾಗಿದೆಯೇ ಎಂದು ವಿಚಾರಿಸಿದ್ದರು. ಇದರಿಂದ ಎಚ್ಚೆತ್ತ ಪೊಲೀಸರು ಕರೆ ಬಂದ ಸ್ಥಳದ ತಾಂತ್ರಿಕ ಮಾಹಿತಿ ಆಧರಿಸಿ ತನಿಖೆ ತೀವ್ರಗೊಳಿಸಿದ್ದರು.
ತನಿಖೆಯ ಜಾಡು ಹಾಸನದತ್ತ ಕೊಂಡೊಯ್ದ ಪೊಲೀಸರಿಗೆ ಅನುಮಾನಾಸ್ಪದ ಸ್ಥಳವೊಂದರ ಸುಳಿವು ಸಿಕ್ಕಿತ್ತು. ಅಲ್ಲಿಗೆ ತೆರಳಿ ಪರಿಶೀಲಿಸಿದಾಗ, ಅಪಹರಣಕ್ಕೊಳಗಾಗಿದ್ದಾನೆಂದು ಹೇಳಲಾಗಿದ್ದ ಮನೀಷ್, ಇಬ್ಬರು ಸಹಚರರೊಂದಿಗೆ ಯಾವುದೇ ಆತಂಕವಿಲ್ಲದೆ ಕುಳಿತಿರುವುದು ಪತ್ತೆಯಾಗಿದೆ.
ಸುದೀರ್ಘ ವಿಚಾರಣೆಯಲ್ಲಿ ತಂದೆಯಿಂದ ₹90 ಲಕ್ಷ ಸುಲಿಗೆ ಮಾಡುವ ಉದ್ದೇಶದಿಂದ ತಾನೇ ಅಪಹರಣದ ನಾಟಕ ರೂಪಿಸಿದ್ದಾಗಿ ಮನೀಷ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಮನೀಷ್ ಸೇರಿದಂತೆ ಮೂವರನ್ನು ಬಂಧಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್. ತಿಳಿಸಿದ್ದಾರೆ.