ಡೈಲಿವಾರ್ತೆ:02/ಅ./2026

ಕೋಟ: ಲೈಸೆನ್ಸ್‌ ನಿಯಮ ಮೀರಿ ರೈಫಲ್‌ಗೆ ಟೆಲಿಸ್ಕೋಪ್ ಅಳವಡಿಕೆ: 4 ಶಸ್ತ್ರಾಸ್ತ್ರಗಳ ವಿರುದ್ಧ ಪ್ರಕರಣ ದಾಖಲು

ಕೋಟ: ಉಡುಪಿ ಜಿಲ್ಲಾದ್ಯಂತ ಶಸ್ತ್ರಾಸ್ತ್ರಗಳ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿದ ಪೊಲೀಸರು, ಪರವಾನಗಿ ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ಮಾರ್ಪಾಡು ಮಾಡಲಾಗಿದ್ದ ನಾಲ್ಕು ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚಿದ್ದು, ಸಂಬಂಧಿಸಿದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಶಸ್ತ್ರಾಸ್ತ್ರ ಬಳಕೆಗೆ ಸಂಬಂಧಿಸಿದ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ, ಪರವಾನಗಿ ಹೊಂದಿರುವವರ ಹಿನ್ನೆಲೆ, ಶಸ್ತ್ರಾಸ್ತ್ರಗಳ ಸ್ಥಿತಿ ಹಾಗೂ ಅವುಗಳಲ್ಲಿ ಅನಧಿಕೃತ ಮಾರ್ಪಾಡುಗಳಾಗಿವೆಯೇ ಎಂಬುದನ್ನು ಪರಿಶೀಲಿಸಲು ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಕಳೆದ ಒಂದು ತಿಂಗಳಿನಿಂದ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಲಾಗಿತ್ತು.

ಈ ವೇಳೆ ಜಿಲ್ಲೆಯಾದ್ಯಂತ ಒಟ್ಟು 2,925 ಶಸ್ತ್ರಾಸ್ತ್ರಗಳನ್ನು ಪರಿಶೀಲಿಸಲಾಗಿದೆ. ಇದರಲ್ಲಿ SBML 1,759, SBBL 554, DBBL 318, DBML 6, ಪಿಸ್ತೂಲ್ 120, ರಿವಾಲ್ವರ್ 119, ರೈಫಲ್ 30, ಬೋರ್ ಗನ್ 13 ಹಾಗೂ NP ಬೋರ್ 6 ಶಸ್ತ್ರಾಸ್ತ್ರಗಳು ಸೇರಿವೆ.
ಪರಿಶೀಲನೆ ವೇಳೆ ಶಂಕರನಾರಾಯಣ, ಕೋಟ, ಬ್ರಹ್ಮಾವರ ಹಾಗೂ ಕಾರ್ಕಳ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದರಂತೆ ಒಟ್ಟು ನಾಲ್ಕು ಶಸ್ತ್ರಾಸ್ತ್ರಗಳಲ್ಲಿ ಅನಧಿಕೃತ ಮಾರ್ಪಾಡು ಮಾಡಿರುವುದು ಪತ್ತೆಯಾಗಿದೆ. ಈ ಸಂಬಂಧ Indian Arms Act-1959ರ ಕಲಂ 25ರಡಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.

ಕೋಟದಲ್ಲಿ ರೈಫಲ್‌ಗೆ ಟೆಲಿಸ್ಕೋಪ್ ಅಳವಡಿಕೆ ಪತ್ತೆ:

ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಹಾರ್ದಳ್ಳಿ-ಮಂಡಳ್ಳಿ ಗ್ರಾಮದ ನಿವಾಸಿ ಮ್ಯಾಥ್ಯೂ ಅವರ ಹೆಸರಿನಲ್ಲಿ NPB ರೈಫಲ್‌ಗೆ ಪರವಾನಗಿ ಇದ್ದು, ಬೆಳೆ ರಕ್ಷಣೆ ಉದ್ದೇಶಕ್ಕಾಗಿ ನೀಡಲಾಗಿದ್ದ ಈ ಪರವಾನಗಿ 16-01-2028ರವರೆಗೆ ಊರ್ಜಿತದಲ್ಲಿದೆ.
ಮ್ಯಾಥ್ಯೂ ಅವರು ತಮ್ಮ ರೈಫಲ್ ಅನ್ನು ಕೋಟ ಪೊಲೀಸ್ ಠಾಣೆಯಲ್ಲಿ ಡೆಪಾಸಿಟ್ ಇಟ್ಟಿದ್ದರು. ಆಗಸ್ಟ್ 26ರಂದು ಉಡುಪಿ ಜಿಲ್ಲಾ ಸಶಸ್ತ್ರ ವಿಭಾಗದ ಸಿಬ್ಬಂದಿ ಠಾಣೆಗೆ ತೆರಳಿ ಡೆಪಾಸಿಟ್‌ನಲ್ಲಿದ್ದ ಶಸ್ತ್ರಾಸ್ತ್ರಗಳ ಪರಿಶೀಲನೆ ನಡೆಸಿದಾಗ, ಮ್ಯಾಥ್ಯೂ ಅವರಿಗೆ ಸೇರಿದ ರೈಫಲ್‌ಗೆ ಬೈನಾಕುಲರ್ ಹಾಗೂ ಟೆಲಿಸ್ಕೋಪ್ ಅಳವಡಿಸಿರುವುದು ಪತ್ತೆಯಾಗಿದೆ.
ಆಯುಧ ಪರವಾನಗಿಯಲ್ಲಿ ರೈಫಲ್‌ಗೆ ಟೆಲಿಸ್ಕೋಪ್ ಅಳವಡಿಸಲು ಯಾವುದೇ ಅನುಮತಿ ನೀಡಿರಲಿಲ್ಲ. ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೆ ರೈಫಲ್‌ಗೆ ಹೆಚ್ಚುವರಿ ಉಪಕರಣಗಳನ್ನು ಅಳವಡಿಸಿ ಮಾರ್ಪಾಡು ಮಾಡಿರುವ ಆರೋಪದಡಿ ಮ್ಯಾಥ್ಯೂ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದೇ ವೇಳೆ, ಶಸ್ತ್ರಾಸ್ತ್ರ ಪರವಾನಗಿ ಹೊಂದಿರುವವರ ಪೈಕಿ ರೌಡಿ ಹಾಳೆ ಹೊಂದಿರುವವರು ಹಾಗೂ ಶಸ್ತ್ರಾಸ್ತ್ರ ಪಡೆದ ಬಳಿಕ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ವಿಶೇಷ ಪರಿಶೀಲನೆ ನಡೆಸಿದ್ದಾರೆ.
ಸಾರ್ವಜನಿಕ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಶಸ್ತ್ರಾಸ್ತ್ರಗಳ ಅಕ್ರಮ ಬಳಕೆ ಹಾಗೂ ಅನಧಿಕೃತ ಮಾರ್ಪಾಡುಗಳ ವಿರುದ್ಧ ಮುಂದಿನ ದಿನಗಳಲ್ಲಿಯೂ ನಿರಂತರ ನಿಗಾ ಹಾಗೂ ಕಾನೂನು ಕ್ರಮ ಮುಂದುವರಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ತಿಳಿಸಿದ್ದಾರೆ.
ಅನಧಿಕೃತ ಶಸ್ತ್ರಾಸ್ತ್ರ ಬಳಕೆ, ಮಾರ್ಪಾಡು ಅಥವಾ ಸಂಗ್ರಹದ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು 08202526444, 08202526709 ಅಥವಾ ವಾಟ್ಸಾಪ್ ಸಂಖ್ಯೆ 9480805400ಕ್ಕೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.