ಡೈಲಿವಾರ್ತೆ:08/ಅ./2026

ಬೆಳ್ತಂಗಡಿ: ಅಡಿಕೆ ಕೊಯ್ಯುತ್ತಿದ್ದ ವೇಳೆ ದುರ್ಘಟನೆ – ವಿದ್ಯುತ್ ತಂತಿಗೆ ಕೋಲು ತಾಗಿ ಯುವಕ ಸಾವು

ಬೆಳ್ತಂಗಡಿ: ಅಡಿಕೆ ಕೊಯ್ಯುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ಕೋಲು ತಾಗಿ ತೀವ್ರ ವಿದ್ಯುತ್ ಆಘಾತಕ್ಕೊಳಗಾದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದಾರುಣ ಘಟನೆ ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಧರ್ಮಸ್ಥಳ ಗ್ರಾಮದ ಅಜಿಕುರಿ ನಿವಾಸಿ ನಝೀರ್ (38) ಎಂದು ಗುರುತಿಸಲಾಗಿದೆ.

ಅಕ್ಟೋಬರ್ 4ರಂದು ಮನೆಯ ಸಮೀಪದ ಅಡಿಕೆ ಮರದಿಂದ ಕೋಲಿನ ಸಹಾಯದಿಂದ ಅಡಿಕೆ ಕೊಯ್ಯುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಡಿಕೆ ಮರದ ಸಮೀಪದಲ್ಲೇ ಹಾದುಹೋಗಿದ್ದ ವಿದ್ಯುತ್ ತಂತಿಗೆ ಅಡಿಕೆ ಕೊಯ್ಯಲು ಬಳಸುತ್ತಿದ್ದ ಕೋಲು ಆಕಸ್ಮಿಕವಾಗಿ ತಾಗಿದ್ದು, ಪರಿಣಾಮ ನಝೀರ್ ಅವರಿಗೆ ತೀವ್ರ ವಿದ್ಯುತ್ ಆಘಾತವಾಗಿದೆ ಎನ್ನಲಾಗಿದೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ, ಚಿಕಿತ್ಸೆ ಮುಂದುವರಿದಿದ್ದರೂ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡುಬರದೆ, ಇಂದು ಮುಂಜಾನೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆಯ ಕುರಿತು ತನಿಖೆ ಮುಂದುವರಿಸಿದ್ದಾರೆ.