



ಡೈಲಿವಾರ್ತೆ:08/ಅ./2026

ಅಮೆರಿಕದಲ್ಲೂ ಮೊಳಗಿದ ಭಾರತೀಯ ಯಕ್ಷಗಾನ:
ಕೋಟೇಶ್ವರದ ಯಕ್ಷಗಾನ ಗುರು ಭಾಗವತ ಕರಣಾಕರ ಆಚಾರ್ಯರಿಂದ ತರಬೇತಿ ಕಾರ್ಯಾಗಾರ, ಪೌರಾಣಿಕ ಪ್ರಸಂಗಗಳ ಪ್ರದರ್ಶನ

ಕೋಟೇಶ್ವರ: ಜಾತಿ, ಧರ್ಮ ಹಾಗೂ ದೇಶದ ಗಡಿಗಳನ್ನು ಮೀರಿ ಕಲಾ ಆಸಕ್ತರನ್ನು ಒಂದೆಡೆ ಸೇರಿಸುವ ಶಕ್ತಿ ಯಕ್ಷಗಾನಕ್ಕಿದೆ. ಆಸಕ್ತಿ ಹಾಗೂ ಪರಿಶ್ರಮ ಇದ್ದರೆ ಯಾರೂ ಈ ಕಲೆಯನ್ನು ಕಲಿಯಬಹುದು ಎಂಬುದಕ್ಕೆ ವಿದೇಶಗಳಲ್ಲೂ ಯಕ್ಷಗಾನಕ್ಕೆ ದೊರೆಯುತ್ತಿರುವ ಪ್ರೋತ್ಸಾಹವೇ ಸಾಕ್ಷಿಯಾಗಿದೆ.

ಭಾರತೀಯ ಸಂಸ್ಕೃತಿ, ಪರಂಪರೆ, ಇತಿಹಾಸ, ಧಾರ್ಮಿಕ ಶ್ರದ್ಧೆ ಹಾಗೂ ನೀತಿಬೋಧನೆಯನ್ನು ಒಳಗೊಂಡಿರುವ ಯಕ್ಷಗಾನ ಕಲೆ ಇಂದು ವಿದೇಶಗಳಲ್ಲೂ ತನ್ನ ಕಂಪನ್ನು ಪಸರಿಸುತ್ತಿದೆ. ಪ್ರತಿಭಾವಂತ ಕಲಾವಿದರು ಹಾಗೂ ಗುರುಗಳ ನಿರಂತರ ಪರಿಶ್ರಮದಿಂದ ಭಾರತೀಯ ಯಕ್ಷಗಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಪರಿಚಯ ದೊರೆಯುತ್ತಿದೆ.
ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ಕೋಟೇಶ್ವರದ ಯಕ್ಷಗಾನ ಗುರು ಹಾಗೂ ಭಾಗವತ ಕರಣಾಕರ ಆಚಾರ್ಯ ಅವರು 2026ರಲ್ಲೂ ಅಮೆರಿಕದ ಕ್ಯಾಲಿಫೋರ್ನಿಯಾ ಹಾಗೂ ಡೆಲವೇರ್‌ನಲ್ಲಿ ಯಕ್ಷಗಾನ ತರಬೇತಿ ಕಾರ್ಯಾಗಾರ ನಡೆಸಿ ಗಮನ ಸೆಳೆದಿದ್ದಾರೆ. ಭಾರತೀಯರು ಮಾತ್ರವಲ್ಲದೆ ವಿವಿಧ ದೇಶಗಳ ಕಲಾವಿದರೂ ಕಾರ್ಯಾಗಾರದಲ್ಲಿ ಭಾಗವಹಿಸಿ ಯಕ್ಷಗಾನದ ಹೆಜ್ಜೆಗಾರಿಕೆ, ಅಭಿನಯ ಹಾಗೂ ಕಲಾ ಪ್ರಕಾರದ ವೈಶಿಷ್ಟ್ಯಗಳನ್ನು ಅಭ್ಯಾಸ ಮಾಡಿದ್ದಾರೆ.

ತರಬೇತಿಯ ಬಳಿಕ ಕವಿ ಮುದ್ದಣ್ಣ ರಚಿತ ‘ರತ್ನಾವತಿ ಕಲ್ಯಾಣ’, ಕವಿ ಪಾರ್ತಿಸುಬ್ಬ ರಚಿತ ‘ವಾಲಿ ಮೋಕ್ಷ’ ಹಾಗೂ ‘ಬಬ್ರುವಾಹನ ಕಾಳಗ’ ಮೊದಲಾದ ಪೌರಾಣಿಕ ಪ್ರಸಂಗಗಳನ್ನು ಕಲಾವಿದರು ಪ್ರದರ್ಶಿಸಿದರು. ವಿದೇಶಿ ನೆಲದಲ್ಲಿ ನಡೆದ ಈ ಪ್ರದರ್ಶನಗಳು ಯಕ್ಷಗಾನದ ವೈಭವವನ್ನು ಪರಿಚಯಿಸುವುದರ ಜೊತೆಗೆ ವಿವಿಧ ದೇಶಗಳ ಕಲಾವಿದರ ನಡುವೆ ಸ್ನೇಹ ಹಾಗೂ ಸಾಂಸ್ಕೃತಿಕ ಬಾಂಧವ್ಯವನ್ನು ಬೆಸೆಯುವ ವೇದಿಕೆಯಾದವು.
ಯಕ್ಷಗಾನವನ್ನು ಅಮೆರಿಕದಲ್ಲಿ ಪರಿಚಯಿಸುವ ಮತ್ತು ಬೆಳೆಸುವ ಕಾರ್ಯದಲ್ಲಿ ಅಲ್ಲಿನ ಕನ್ನಡಿಗರ ಕನ್ನಡಾಭಿಮಾನ ಹಾಗೂ ಸಹಕಾರವೂ ಮಹತ್ವದ ಪಾತ್ರ ವಹಿಸಿದೆ. ವಿಶೇಷವಾಗಿ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಪದಾಧಿಕಾರಿಗಳು ಹಾಗೂ ಸನಾತನ ಧರ್ಮ ಕೇಂದ್ರದ ಶ್ರೀಕುಮಾರ್ ಸ್ವಾಮಿ ಜೋಶಿ, ಶ್ರೀಮತಿ ಶಾಂತಿಕಾ ಶ್ರೀಪಾದ ಹೆಗಡೆ, ಶ್ರೀಮತಿ ಸೌಮ್ಯ ಸಂದೀಪ್ ನಾರಾಯಣ್, ಶ್ರೀಮತಿ ಮಾನಸ ಗಿರೀಶ್, ಶ್ರೀಮತಿ ಉಷಾ ಹೆಬ್ಬಾರ್, ಶ್ರೀ ರಘು ಕಟ್ಟಿನಕೆರೆ ಹಾಗೂ ಡಾ. ರಮೇಶ್ ಕೇಕುಡಾ ಸೇರಿದಂತೆ ಹಲವು ಪ್ರಮುಖರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ್ದಾರೆ.

ಕೋಟೇಶ್ವರದ ಕರಣಾಕರ ಆಚಾರ್ಯ ಅವರು ದುರ್ಗಾಂಬಿಕಾ ಯಕ್ಷಗಾನ ಕೇಂದ್ರ (ರಿ.) ಮೂಲಕ ಯಕ್ಷಗಾನ ಗುರುವಾಗಿ ಸೇವೆ ಸಲ್ಲಿಸುತ್ತಿದ್ದು, ಕುಂದಾಪುರದ ಎರಡು ಯಕ್ಷಗಾನ ಶಾಲೆಗಳಲ್ಲಿಯೂ ತರಬೇತಿ ನೀಡುತ್ತಿದ್ದಾರೆ. ಅಲ್ಲದೆ ಸುತ್ತಮುತ್ತಲಿನ ಶಾಲಾ-ಕಾಲೇಜುಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳಲ್ಲಿ ಯಕ್ಷಗಾನ ತರಬೇತಿ ಮತ್ತು ಪ್ರದರ್ಶನಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಯಕ್ಷಗಾನ ಕಲೆಯನ್ನು ವಿದೇಶಗಳಲ್ಲೂ ಬೆಳೆಸುವ ಉದ್ದೇಶದಿಂದ ಸತತವಾಗಿ ಕಾರ್ಯನಿರ್ವಹಿಸುತ್ತಿರುವ ಕರಣಾಕರ ಆಚಾರ್ಯ ಅವರು ಎರಡನೇ ಬಾರಿಗೆ ಅಮೆರಿಕ ಪ್ರವಾಸ ಕೈಗೊಂಡಿದ್ದು, ಅಲ್ಲಿನ ಕಲಾವಿದರಿಗೆ ತರಬೇತಿ ನೀಡುವ ಮೂಲಕ ಭಾರತೀಯ ಸಾಂಸ್ಕೃತಿಕ ಪರಂಪರೆಯ ಈ ವಿಶಿಷ್ಟ ಕಲೆಯನ್ನು ಮತ್ತಷ್ಟು ಜನರಿಗೆ ಪರಿಚಯಿಸುವ ಕಾರ್ಯ ಮುಂದುವರಿಸಿದ್ದಾರೆ.
ಯಕ್ಷಗಾನದ ಬೆಳವಣಿಗೆಗೆ ಕಲಾವಿದರ ಪರಿಶ್ರಮದ ಜತೆಗೆ ಕನ್ನಡಿಗರು ಹಾಗೂ ಕಲಾಭಿಮಾನಿಗಳ ಸಹಕಾರವೂ ಅಗತ್ಯವಾಗಿದ್ದು, ಅಮೆರಿಕದಲ್ಲಿನ ಈ ಪ್ರಯತ್ನವು ಭಾರತೀಯ ಸಂಸ್ಕೃತಿಯ ಅಂತಾರಾಷ್ಟ್ರೀಯ ಪ್ರಸಾರಕ್ಕೆ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.