ಡೈಲಿವಾರ್ತೆ:08/ಅ./2026

ಫ್ರೀ ಫೈರ್‌ ಗೇಮ್‌ ಹಿಂದೆ ಹಣದ ದಂಧೆ? ₹4 ಲಕ್ಷಕ್ಕೆ ಒತ್ತಡ – ಸ್ನೇಹಿತರಿಂದ ಕಿರುಕುಳ ಆರೋಪ, 13ರ ಬಾಲಕ ಆತ್ಮಹತ್ಯೆಗೆ ಶರಣು!

ದಾವಣಗೆರೆ: ಆನ್‌ಲೈನ್ ಗೇಮ್‌ನ ವ್ಯಸನದ ಬೆನ್ನಲ್ಲೇ ಸ್ನೇಹಿತರ ಕಿರುಕುಳ ಹಾಗೂ ಹಣಕ್ಕಾಗಿ ಒತ್ತಡಕ್ಕೆ ಒಳಗಾದ 13 ವರ್ಷದ ಬಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಚನ್ನಗಿರಿ ತಾಲೂಕಿನ ಪಾಂಡೊಮಟ್ಟಿಯಲ್ಲಿ ನಡೆದಿದೆ.

ಮೃತ ಬಾಲಕನನ್ನು ಪಾಂಡೊಮಟ್ಟಿ ಗ್ರಾಮದ ಮನೋಜ್ ಟಿ.ಆರ್. (13) ಎಂದು ಗುರುತಿಸಲಾಗಿದೆ.

ಪೋಷಕರ ಆರೋಪದ ಪ್ರಕಾರ, ಗ್ರಾಮದ ನಾಲ್ವರು ಬಾಲಕರು ಫ್ರೀ ಫೈರ್ ಆನ್‌ಲೈನ್ ಗೇಮ್‌ನಲ್ಲಿ ಹಣ ತೊಡಗಿಸುವಂತೆ ಮನೋಜ್‌ನನ್ನು ಒತ್ತಾಯಿಸುತ್ತಿದ್ದರು. ಹಣ ತರದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಹಣಕ್ಕಾಗಿ ಆತನ ಮೇಲೆ ಹಲ್ಲೆಯನ್ನೂ ನಡೆಸಿದ್ದರು ಎನ್ನಲಾಗಿದೆ.

ಸ್ನೇಹಿತರ ಒತ್ತಡಕ್ಕೆ ಒಳಗಾದ ಮನೋಜ್, ಮನೆಯಲ್ಲಿದ್ದ ಸುಮಾರು ₹4 ಲಕ್ಷ ಹಣವನ್ನು ತೆಗೆದುಕೊಂಡು ಹೋಗಿದ್ದ ಎನ್ನಲಾಗಿದೆ. ಮನೆಯಲ್ಲಿ ಹಣ ಕಡಿಮೆಯಾಗಿರುವುದು ಗಮನಕ್ಕೆ ಬಂದ ಬಳಿಕ ಪರಿಶೀಲನೆ ನಡೆಸಿದಾಗ, ಬಾಲಕನ ಮೇಲೆ ಹಣ ತರುವಂತೆ ಒತ್ತಡ ಹೇರಲಾಗುತ್ತಿತ್ತು ಎಂಬ ವಿಚಾರ ಪೋಷಕರಿಗೆ ತಿಳಿದುಬಂದಿದೆ ಎಂದು ಹೇಳಲಾಗಿದೆ.
ಈ ನಡುವೆ ಸ್ನೇಹಿತರ ಕಿರುಕುಳ ಮತ್ತು ಬೆದರಿಕೆಯಿಂದ ಮನೋಜ್ ತೀವ್ರವಾಗಿ ನೊಂದಿದ್ದ ಎನ್ನಲಾಗಿದ್ದು, ಇದೇ ಕಾರಣದಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕನ ಸಾವಿನ ಹಿನ್ನೆಲೆ, ಹಣದ ವಿಚಾರ ಹಾಗೂ ಸ್ನೇಹಿತರಿಂದ ನಡೆದಿತ್ತೆನ್ನಲಾದ ಕಿರುಕುಳದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದ ಸ್ಪಷ್ಟವಾಗಬೇಕಿದೆ.