




ಡೈಲಿವಾರ್ತೆ:24/ಅ./2026

ನಾಪತ್ತೆಯಾಗಿದ್ದ KRIDL ಎಂಜಿನಿಯರ್
40 ದಿನಗಳ ಬಳಿಕ ಮುಂಬೈನಲ್ಲಿ ಪತ್ತೆ!

ಗದಗ: ಕಾಮಗಾರಿಗಳಿಗೆ ಅಗತ್ಯ ಅನುದಾನ ಬಿಡುಗಡೆಯಾಗದಿರುವುದರಿಂದ ಉಂಟಾದ ಆರ್ಥಿಕ ಒತ್ತಡ ಹಾಗೂ ಗುತ್ತಿಗೆದಾರರ ಕಿರುಕುಳದಿಂದ ತೀವ್ರವಾಗಿ ನೊಂದಿದ್ದಾಗಿ ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್ಐಡಿಎಲ್) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪರ್ವೇಜ್ ಧಾರವಾಡ ಅವರು ಸುಮಾರು 40 ದಿನಗಳ ಬಳಿಕ ಮಹಾರಾಷ್ಟ್ರದ ಮುಂಬೈನಲ್ಲಿ ಪತ್ತೆಯಾಗಿದ್ದಾರೆ.
ಗದಗ ಪೊಲೀಸರು ಅವರನ್ನು ಪತ್ತೆಹಚ್ಚಿದ್ದು ಮುಂದಿನ ವಿಚಾರಣೆಗಾಗಿ ಗದಗಕ್ಕೆ ಕರೆತರಲು ಕ್ರಮ ಕೈಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 13ರಂದು ಗದಗದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ ಪರ್ವೇಜ್ ಧಾರವಾಡ ಅವರು ಬಳಿಕ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದರು. ಅವರ ಪತ್ತೆಗಾಗಿ ಗದಗ ಪೊಲೀಸರು ಐದು ವಿಶೇಷ ತಂಡಗಳನ್ನು ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದರು. ಪ್ರಕರಣ ರಾಜ್ಯಮಟ್ಟದಲ್ಲಿ ಗಮನ ಸೆಳೆದಿದ್ದು, ಅಧಿಕಾರಿಯ ನಾಪತ್ತೆಯ ಸುತ್ತ ಹಲವು ಅನುಮಾನಗಳು ಮೂಡಿದ್ದವು.
ನಾಪತ್ತೆಯಾಗುವ ಮುನ್ನ ಪರ್ವೇಜ್ ಅವರು ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗದ ಕಾರಣ ಎದುರಿಸುತ್ತಿದ್ದ ಒತ್ತಡದ ಕುರಿತು ಡೆತ್ನೋಟ್ ಬರೆದಿಟ್ಟಿದ್ದರು ಎನ್ನಲಾಗಿದೆ. ಈ ಬೆಳವಣಿಗೆ ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಅವರು ತೆರಳಿದ್ದ ಮಾರ್ಗ, ಸಂಪರ್ಕಗಳ ವಿವರ ಹಾಗೂ ಲಭ್ಯವಿದ್ದ ತಾಂತ್ರಿಕ ಸುಳಿವುಗಳನ್ನು ಆಧರಿಸಿ ಶೋಧ ಕಾರ್ಯ ಮುಂದುವರಿಸಿದ್ದರು.
ಹಲವು ನಗರಗಳಲ್ಲಿ ತೀವ್ರ ಶೋಧ:
ಪರ್ವೇಜ್ ಅವರ ಪತ್ತೆಗಾಗಿ ಪೊಲೀಸರು ಬೆಂಗಳೂರು, ಮಧ್ಯಪ್ರದೇಶದ ಭೋಪಾಲ್, ಮಹಾರಾಷ್ಟ್ರದ ಮೀರಜ್ ಸೇರಿದಂತೆ ವಿವಿಧ ನಗರಗಳಲ್ಲಿ ಹುಡುಕಾಟ ನಡೆಸಿದ್ದರು. ರೈಲು ನಿಲ್ದಾಣಗಳ ಸಿಸಿಟಿವಿ ದೃಶ್ಯಾವಳಿಗಳು, ಮೊಬೈಲ್ ಸಂಬಂಧಿತ ತಾಂತ್ರಿಕ ಮಾಹಿತಿ ಹಾಗೂ ಇತರ ಸುಳಿವುಗಳನ್ನು ಪರಿಶೀಲಿಸಿ ತನಿಖೆ ನಡೆಸಲಾಗುತ್ತಿತ್ತು. ಐದು ವಿಶೇಷ ತಂಡಗಳು ವಿವಿಧ ದಿಕ್ಕುಗಳಲ್ಲಿ ಕಾರ್ಯಾಚರಣೆ ನಡೆಸಿದರೂ ದೀರ್ಘಕಾಲ ಅವರ ಸುಳಿವು ಲಭ್ಯವಾಗಿರಲಿಲ್ಲ. ಇದೀಗ ಮುಂಬೈನಲ್ಲಿ ಪತ್ತೆಯಾಗಿರುವುದು ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ.
ಗದಗಕ್ಕೆ ಕರೆತಂದು ವಿಚಾರಣೆ ಸಾಧ್ಯತೆ:
ಮುಂಬೈನಲ್ಲಿ ಪತ್ತೆಯಾಗಿರುವ ಪರ್ವೇಜ್ ಅವರನ್ನು ಗದಗಕ್ಕೆ ಕರೆತರಲು ಪೊಲೀಸರು ಸಿದ್ಧತೆ ನಡೆಸಿದ್ದು, ಶುಕ್ರವಾರ ಕರೆತರುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಬಳಿಕ ಅವರ ನಾಪತ್ತೆಗೆ ಕಾರಣವೇನು ಈ ಅವಧಿಯಲ್ಲಿ ಎಲ್ಲಿದ್ದರು ಹಾಗೂ ನಾಪತ್ತೆಯಾಗುವ ಮುನ್ನ ಉಲ್ಲೇಖಿಸಿದ್ದ ಒತ್ತಡದ ಸ್ವರೂಪವೇನು ಎಂಬುದರ ಕುರಿತು ವಿಚಾರಣೆ ನಡೆಸುವ ನಿರೀಕ್ಷೆಯಿದೆ.
ಪರ್ವೇಜ್ ಅವರ ಹೇಳಿಕೆ ಹಾಗೂ ಪೊಲೀಸ್ ವಿಚಾರಣೆಯಿಂದಲೇ ನಾಪತ್ತೆಯ ಹಿಂದಿನ ನೈಜ ಕಾರಣಗಳು, ಅವರು ಎದುರಿಸುತ್ತಿದ್ದ ಸಮಸ್ಯೆಗಳು ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಇತರ ಪ್ರಮುಖ ಅಂಶಗಳ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗಬೇಕಿದೆ.