




ಡೈಲಿವಾರ್ತೆ:24/ಅ./2026

ಶಿಕಾರಿಪುರ: ಭೀಕರ ರಸ್ತೆ ಅಪಘಾತಕ್ಕೆ ನಾಲ್ವರು ಬಲಿ – ಮತ್ತೊಬ್ಬರಿಗೆ ಗಂಭೀರ ಗಾಯ!

ಶಿವಮೊಗ್ಗ: ಕಾರು ಮತ್ತು ಅಡಿಕೆ ತುಂಬಿದ್ದ ಕ್ಯಾಂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಶುಕ್ರವಾರ ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮದ ಸಮೀಪ ನಡೆದಿದೆ.
ಮೃತರನ್ನು ಶಿಕಾರಿಪುರ ತಾಲೂಕಿನ ಮುತ್ತಗಿ ಗ್ರಾಮದ ದಂಪತಿ ಉಜ್ಜಪ್ಪ (77), ಲಲಿತಮ್ಮ (65), ಹಿರೇಕೇರೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ಜಯಮ್ಮ (64) ಹಾಗೂ ಕಾರು ಚಾಲಕ ಸಿದ್ದು ವಾಲ್ಮೀಕಿ (35) ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಜಯಮ್ಮ ಅವರ ಪತಿ ಹನುಮಂತಪ್ಪ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್ ತಮ್ಮ ಊರಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಅಪಘಾತದ ತೀವ್ರತೆಗೆ ಕಾರು ಚಾಲಕ ಸಿದ್ದು ವಾಲ್ಮೀಕಿ ಹಾಗೂ ಲಲಿತಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಉಜ್ಜಪ್ಪ ಮತ್ತು ಜಯಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.