




ಡೈಲಿವಾರ್ತೆ:24/ಅ./2026

ಉಡುಪಿ ಜಾಮೀಯಾ ಮಸೀದಿಯ ಕಾರ್ಯದರ್ಶಿ ಮೇಲೆ ಹಲ್ಲೆ, ಜೀವ ಬೆದರಿಕೆ: ಐವರ ವಿರುದ್ಧ ಪ್ರಕರಣ ದಾಖಲು

ಉಡುಪಿ: ನಗರದ ಜಾಮೀಯಾ ಮಸೀದಿಯ ಒಳಭಾಗದಲ್ಲಿ ಮಸೀದಿಯ ಕಾರ್ಯದರ್ಶಿ ಖಾಲೀದ್ ಅಬ್ದುಲ್ ಅಜೀಜ್ ಅವರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ ಆರೋಪದ ಮೇರೆಗೆ ಐವರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2026ರ ಅಕ್ಟೋಬರ್ 9ರಂದು ಶುಕ್ರವಾರ ಜುಮಾ ನಮಾಝ್ ಮುಗಿದ ಬಳಿಕ ಮಧ್ಯಾಹ್ನ ಸುಮಾರು 1.45ಕ್ಕೆ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಝೀರ್ ಅಹ್ಮದ್, ಶಂಶುದ್ದೀನ್, ಹನೀಫ್, ಬಶೀರ್ ಅಬ್ದುಲ್ ರಹಮಾನ್ ಹಾಗೂ ಅಝರ್ ಎಂಬವರು ಮಸೀದಿಯ ಒಳಗಡೆ ನಾಲ್ಕೂ ದಿಕ್ಕುಗಳಿಂದ ಸುತ್ತುವರಿದು ಖಾಲೀದ್ ಅಬ್ದುಲ್ ಅಜೀಜ್ ಅವರ ಮುಖ, ತಲೆ ಹಾಗೂ ಮೂಗಿನ ಭಾಗಕ್ಕೆ ಬಲವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಯಿಂದ ತಪ್ಪಿಸಿಕೊಂಡು ಜೀವ ರಕ್ಷಣೆಗಾಗಿ ಮಸೀದಿಯ ಒಳಾಂಗಣದ ಕಡೆಗೆ ಓಡಿದಾಗಲೂ ಆರೋಪಿತರು ಬೆನ್ನಟ್ಟಿ ಹಿಡಿದು ಮತ್ತೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 145/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 352, 351(2), 118(1) ಹಾಗೂ 190ರ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.