ಡೈಲಿವಾರ್ತೆ:29/ಅ./2026

ನಂದಿನಿ ಹಾಲಿಗೆ ₹8 ದರ ಏರಿಕೆ: ನ. 1ರಿಂದ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ!

ಬೆಂಗಳೂರು, ಅ. 29: ರಾಜ್ಯದ ಹಾಲು ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದ್ದು, ನಂದಿನಿ ಹಾಲಿನ ಪ್ರತಿ ಲೀಟರ್‌ಗೆ ₹8 ದರ ಹೆಚ್ಚಳ ಮಾಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಅಕ್ಟೋಬರ್ 29ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಪರಿಷ್ಕೃತ ದರ ನವೆಂಬರ್ 1ರಿಂದ ಜಾರಿಗೆ ಬರಲಿದೆ.
ದರ ಏರಿಕೆಯಿಂದ ಸಂಗ್ರಹವಾಗುವ ಹೆಚ್ಚುವರಿ ಮೊತ್ತದಲ್ಲಿ ₹7 ಅನ್ನು ಹಾಲು ಉತ್ಪಾದಕ ರೈತರಿಗೆ ನೀಡಲು ಹಾಗೂ ಉಳಿದ ₹1 ಅನ್ನು ಹಾಲು ಒಕ್ಕೂಟಗಳಿಗೆ ಹಂಚಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ, ಒಟ್ಟು ದರ ಏರಿಕೆಯಲ್ಲಿ ಶೇ. 90ರಷ್ಟು ರೈತರ ಪಾಲಾಗಲಿದ್ದು, ಶೇ. 10ರಷ್ಟು ಒಕ್ಕೂಟಗಳಿಗೆ ದೊರೆಯಲಿದೆ.

ಹಾಲು ಒಕ್ಕೂಟಗಳು ಈ ಹಿಂದೆ ದರ ಏರಿಕೆಯ ಮೊತ್ತವನ್ನು 70:30 ಅನುಪಾತದಲ್ಲಿ ಹಂಚಿಕೆ ಮಾಡುವಂತೆ ಮನವಿ ಮಾಡಿದ್ದವು. ಆದರೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 80:20 ಅನುಪಾತದ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಅಂತಿಮವಾಗಿ ಸಚಿವ ಸಂಪುಟವು 90:10ರ ಅನುಪಾತದಲ್ಲಿ ಹಂಚಿಕೆ ಮಾಡಲು ಒಪ್ಪಿಗೆ ನೀಡಿದೆ.

ರೈತರಿಗೆ ಪ್ರತಿ ಲೀಟರ್‌ಗೆ ₹7 ಹೆಚ್ಚುವರಿ ಲಾಭ:
ಹಾಲು ಉತ್ಪಾದಕ ರೈತರಿಗೆ ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ ದರ ಏರಿಕೆಯ ಬಹುಪಾಲನ್ನು ಅವರಿಗೇ ನೀಡಲು ನಿರ್ಧರಿಸಲಾಗಿದೆ. ಬಮುಲ್ ವ್ಯಾಪ್ತಿಯಲ್ಲಿ ಪ್ರಸ್ತುತ ಪ್ರತಿ ಲೀಟರ್ ಹಾಲಿಗೆ ರೈತರಿಗೆ ₹33ರಿಂದ ₹35ರವರೆಗೆ ಪಾವತಿಸಲಾಗುತ್ತಿದ್ದು, ಪರಿಷ್ಕರಣೆಯ ಬಳಿಕ ಈ ಮೊತ್ತ ₹40ರಿಂದ ₹42ಕ್ಕೆ ಏರಿಕೆಯಾಗಲಿದೆ ಎಂದು ತಿಳಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಸಚಿವ ಕೃಷ್ಣ ಬೈರೇಗೌಡ, ಹಾಲಿನ ದರವನ್ನು ₹10 ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇತ್ತು. ಹಾಲು ಒಕ್ಕೂಟಗಳ ಸ್ವಾಯತ್ತತೆಗೆ ಧಕ್ಕೆಯಾಗಬಾರದು ಎಂಬ ನಿಲುವಿನೊಂದಿಗೆ, ಸರ್ಕಾರವು ದರ ಏರಿಕೆಯನ್ನು ₹8ಕ್ಕೆ ಸೀಮಿತಗೊಳಿಸಿದೆ. ಇದರಲ್ಲಿ ₹7 ರೈತರಿಗೆ ಹಾಗೂ ₹1 ಒಕ್ಕೂಟಗಳಿಗೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಪ್ರಸ್ತುತ ರೈತರಿಗೆ ಪ್ರತಿ ಲೀಟರ್ ಹಾಲಿಗೆ ₹35ರವರೆಗೆ ದೊರೆಯುತ್ತಿದ್ದು, ಸರ್ಕಾರದ ₹5 ಸಹಾಯಧನ ಸೇರಿದಂತೆ ಒಟ್ಟು ಮೊತ್ತ ₹42ರವರೆಗೆ ತಲುಪಲಿದೆ. ಬರಗಾಲದ ಪರಿಸ್ಥಿತಿಯಲ್ಲಿ ಹಾಲು ಉತ್ಪಾದಕರಿಗೆ ಹೆಚ್ಚಿನ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಚಿವ ಸಂಪುಟವು ಸರ್ವಾನುಮತದಿಂದ ದರ ಏರಿಕೆಗೆ ಅನುಮೋದನೆ ನೀಡಿದೆ ಎಂದು ಅವರು ವಿವರಿಸಿದರು.

ಯಾವ ಹಾಲಿನ ದರ ಎಷ್ಟಾಗಲಿದೆ?
ನವೆಂಬರ್ 1ರಿಂದ ಜಾರಿಗೆ ಬರಲಿರುವ ಪರಿಷ್ಕೃತ ದರದ ಪ್ರಕಾರ, ವಿವಿಧ ಮಾದರಿಯ ನಂದಿನಿ ಹಾಲಿನ ಬೆಲೆಯಲ್ಲಿ ಏರಿಕೆಯಾಗಲಿದೆ.
➤ ಟೋನ್ಡ್ ಹಾಲು (ನೀಲಿ ಪ್ಯಾಕೆಟ್): ₹46ರಿಂದ ₹54ಕ್ಕೆ
➤ ಹೋಮೋಜಿನೈಸ್ಡ್ ಟೋನ್ಡ್ ಹಾಲು (ಹಸಿರು ಪ್ಯಾಕೆಟ್): ₹47ರಿಂದ ₹55ಕ್ಕೆ
➤ ಹೋಮೋಜಿನೈಸ್ಡ್ ಹಸುವಿನ ಹಾಲು: ₹50ರಿಂದ ₹58ಕ್ಕೆ
➤ ಶುಭಂ ಹಾಲು (ಕಿತ್ತಳೆ ಪ್ಯಾಕೆಟ್): ₹52ರಿಂದ ₹60ಕ್ಕೆ
➤ ಸಮೃದ್ಧಿ ಹಾಲು (ನೇರಳೆ ಪ್ಯಾಕೆಟ್): ₹55ರಿಂದ ₹64ಕ್ಕೆ
➤ ಸ್ಪೆಷಲ್ ಹಾಲು: ₹52ರಿಂದ ₹60ಕ್ಕೆ
➤ ಡಬಲ್ ಟೋನ್ಡ್ ಹಾಲು: ₹43ರಿಂದ ₹51ಕ್ಕೆ
ಹಾಲಿನ ದರ ಏರಿಕೆಯಿಂದ ಗ್ರಾಹಕರ ಮಾಸಿಕ ವೆಚ್ಚ ಹೆಚ್ಚಾಗಲಿದ್ದು, ಮತ್ತೊಂದೆಡೆ ಹಾಲು ಉತ್ಪಾದಕ ರೈತರಿಗೆ ಹೆಚ್ಚಿನ ಮೊತ್ತ ದೊರೆಯಲಿದೆ. ರೈತರ ಆದಾಯ ಹೆಚ್ಚಿಸುವ ಸರ್ಕಾರದ ಕ್ರಮವು ಗ್ರಾಹಕರ ಮೇಲಿನ ಹೆಚ್ಚುವರಿ ಆರ್ಥಿಕ ಹೊರೆಯೊಂದಿಗೆ ಚರ್ಚೆಗೆ ಗ್ರಾಸವಾಗುವ ಸಾಧ್ಯತೆಯಿದೆ.

ಬಸ್ ಟಿಕೆಟ್ ದರ ಏರಿಕೆ ನಿರ್ಧಾರ ನ. 5ಕ್ಕೆ:
ಇದೇ ವೇಳೆ, ರಾಜ್ಯದಲ್ಲಿ ಬಸ್ ಪ್ರಯಾಣ ದರ ಹೆಚ್ಚಿಸುವ ವಿಚಾರವೂ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬಂದಿದೆ. ಆದರೆ, ತಕ್ಷಣವೇ ದರ ಏರಿಕೆಗೆ ಅನುಮೋದನೆ ನೀಡದೆ, ಅಂತಿಮ ನಿರ್ಧಾರ ಕೈಗೊಳ್ಳುವ ಹೊಣೆಯನ್ನು ಸಾರಿಗೆ ಇಲಾಖೆಗೆ ವಹಿಸಲಾಗಿದೆ.
ಸಾರಿಗೆ ಇಲಾಖೆಯು ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದ್ದು, ನವೆಂಬರ್ 5ರಂದು ಬಸ್ ಟಿಕೆಟ್ ದರ ಏರಿಕೆ ಕುರಿತು ನಿರ್ಧಾರ ಪ್ರಕಟವಾಗುವ ನಿರೀಕ್ಷೆಯಿದೆ.