


ಡೈಲಿವಾರ್ತೆ: 03/ನ./2026




ಬ್ರಹ್ಮಾವರದ ಫಿಶ್ ಫ್ಯಾಕ್ಟರಿ ಮೇಲೆ ಅಕ್ಕಪಡೆ ದಾಳಿ: ಶಿಕ್ಷಣದಿಂದ ವಂಚಿತರಾಗಿದ್ದ 30 ಮಕ್ಕಳು ರಕ್ಷಣೆ

ಉಡುಪಿ: ಬ್ರಹ್ಮಾವರ ತಾಲೂಕಿನ ಫಿಶ್ ಫ್ಯಾಕ್ಟರಿಯೊಂದರಲ್ಲಿ ಅಕ್ಕಪಡೆ ನಡೆಸಿದ ಕಾರ್ಯಾಚರಣೆಯಲ್ಲಿ 30 ಮಕ್ಕಳನ್ನು ರಕ್ಷಿಸಲಾಗಿದೆ.
ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಶಾಲೆಗೆ ತೆರಳದೆ ಫ್ಯಾಕ್ಟರಿಯ ಸುತ್ತಮುತ್ತ ಕಾಲ ಕಳೆಯುತ್ತಿರುವುದು ಕಾರ್ಯಾಚರಣೆಯ ವೇಳೆ ಬೆಳಕಿಗೆ ಬಂದಿದೆ.
ಸಿಆರ್ಪಿ ಹಾಗೂ ಇಸಿಒ ಇಲಾಖೆಯ ಸಹಯೋಗದೊಂದಿಗೆ ಅಕ್ಕಪಡೆ ಈ ಕಾರ್ಯಾಚರಣೆ ನಡೆಸಿದೆ. ಫ್ಯಾಕ್ಟರಿಯಲ್ಲಿ ಮಕ್ಕಳ ಉಪಸ್ಥಿತಿಯನ್ನು ಪತ್ತೆಹಚ್ಚಿದ ಅಧಿಕಾರಿಗಳು, 6 ವರ್ಷ ಮೇಲ್ಪಟ್ಟು 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿದ್ದಾರೆ.
ರಕ್ಷಿಸಲಾದ 30 ಮಕ್ಕಳ ಪೈಕಿ 7 ಬಾಲಕಿಯರನ್ನು ಬಾಲಕಿಯರ ಬಾಲಮಂದಿರಕ್ಕೆ ಹಾಗೂ 23 ಬಾಲಕರನ್ನು ಬಾಲಕರ ಬಾಲಮಂದಿರಕ್ಕೆ ದಾಖಲಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ.
ಮಕ್ಕಳು ಶಿಕ್ಷಣದಿಂದ ದೂರ ಉಳಿದಿರುವುದು ಈ ಕಾರ್ಯಾಚರಣೆಯಲ್ಲಿ ಗಮನಕ್ಕೆ ಬಂದಿದ್ದು, ರಕ್ಷಿಸಲಾದ ಮಕ್ಕಳ ಸುರಕ್ಷತೆ ಹಾಗೂ ಮುಂದಿನ ಆರೈಕೆಯ ದೃಷ್ಟಿಯಿಂದ ಅವರನ್ನು ಬಾಲಮಂದಿರಗಳಿಗೆ ದಾಖಲಿಸುವ ಕ್ರಮ ಕೈಗೊಳ್ಳಲಾಗಿದೆ.

