


ಡೈಲಿವಾರ್ತೆ: 04/ನ./2026




ಮಣಿಪಾಲದಲ್ಲಿ ನಡುರಸ್ತೆಯಲ್ಲೇ ಯುವಕರ ಮಾರಾಮಾರಿ: ಹೊಡೆದಾಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಉಡುಪಿ: ಶೈಕ್ಷಣಿಕ ಹಾಗೂ ವಾಣಿಜ್ಯ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿರುವ ಮಣಿಪಾಲದಲ್ಲಿ ತಡರಾತ್ರಿ ಯುವಕರ ಗುಂಪು ನಡುರಸ್ತೆಯಲ್ಲೇ ಪರಸ್ಪರ ಹೊಡೆದಾಡಿಕೊಂಡ ಘಟನೆ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಮದ್ಯದ ಅಮಲಿನಲ್ಲಿದ್ದ ಯುವಕರ ನಡುವೆ ಆರಂಭವಾದ ಮಾತಿನ ಚಕಮಕಿ ಹಂತ ಹಂತವಾಗಿ ವಿಕೋಪಕ್ಕೆ ತಿರುಗಿದ್ದು, ಆರಂಭದಲ್ಲಿ ಇಬ್ಬರ ನಡುವೆ ನಡೆದ ಗಲಾಟೆ ಬಳಿಕ ಎರಡು ಗುಂಪುಗಳ ನಡುವಿನ ಘರ್ಷಣೆಯಾಗಿ ಮಾರ್ಪಟ್ಟಿದೆ. ಜನಸಂಚಾರವಿರುವ ರಸ್ತೆಯ ಮಧ್ಯೆಯೇ ಯುವಕರು ಪರಸ್ಪರ ಹಲ್ಲೆ ನಡೆಸಿದ್ದು, ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಗಮನಾರ್ಹ ಸಂಗತಿಯೆಂದರೆ, ಈ ಘಟನೆ ಮಣಿಪಾಲ ಪೊಲೀಸ್ ಠಾಣೆಯಿಂದ ಕೂಗಳತೆಯ ದೂರದಲ್ಲೇ ನಡೆದಿದೆ ಎನ್ನಲಾಗಿದೆ. ಶೈಕ್ಷಣಿಕ ಕೇಂದ್ರವಾಗಿ ಗುರುತಿಸಿಕೊಂಡಿರುವ ಮಣಿಪಾಲದಲ್ಲಿ ತಡರಾತ್ರಿ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಸ್ಥಳೀಯರು ಹಾಗೂ ಸಾರ್ವಜನಿಕ ವಲಯದಲ್ಲಿ ಕಳವಳ ಮೂಡಿಸಿದೆ.
ಮಣಿಪಾಲದ ಪಬ್, ಬಾರ್ ಹಾಗೂ ರೆಸ್ಟೋರೆಂಟ್ಗಳ ಸುತ್ತಮುತ್ತ ರಾತ್ರಿ ವೇಳೆ ಗಲಾಟೆಗಳು ನಡೆಯುತ್ತಿರುವ ಬಗ್ಗೆ ಈಗಾಗಲೇ ಹಲವು ದೂರುಗಳು ಕೇಳಿಬರುತ್ತಿವೆ. ಈ ಹಿಂದೆ ನಿಗದಿತ ಸಮಯ ಮೀರಿ ಕಾರ್ಯನಿರ್ವಹಿಸುತ್ತಿದ್ದ ಬಾರ್ ಮತ್ತು ರೆಸ್ಟೋರೆಂಟ್ಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ತಡರಾತ್ರಿಯವರೆಗೂ ಮದ್ಯ ಸೇವನೆಗೆ ಅವಕಾಶ ನೀಡಲಾಗುತ್ತಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಮದ್ಯದ ಅಮಲಿನಲ್ಲಿ ಹೋಟೆಲ್ ಹಾಗೂ ಪಬ್ಗಳ ಆವರಣಕ್ಕೆ ಸೀಮಿತವಾಗಿರುತ್ತಿದ್ದ ಗಲಾಟೆಗಳು ಇದೀಗ ಸಾರ್ವಜನಿಕ ರಸ್ತೆಗಳಿಗೂ ವ್ಯಾಪಿಸುತ್ತಿರುವುದು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪೊಲೀಸ್ ಠಾಣೆಯ ಸಮೀಪದಲ್ಲೇ ಇಂತಹ ಘಟನೆ ನಡೆದಿರುವುದು ರಾತ್ರಿ ಗಸ್ತು ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಪರಿಣಾಮಕಾರಿತ್ವದ ಬಗ್ಗೆಯೂ ಚರ್ಚೆಗೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಮಣಿಪಾಲದಲ್ಲಿ ತಡರಾತ್ರಿ ನಡೆಯುವ ಚಟುವಟಿಕೆಗಳ ಮೇಲೆ ಪೊಲೀಸರು ಹೆಚ್ಚಿನ ನಿಗಾ ವಹಿಸಬೇಕು. ನಿಯಮ ಉಲ್ಲಂಘಿಸುವ ಬಾರ್, ಪಬ್ ಮತ್ತು ರೆಸ್ಟೋರೆಂಟ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಜತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಅಶಾಂತಿ ಸೃಷ್ಟಿಸುವವರ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

