ಡೈಲಿವಾರ್ತೆ: 03/ನ./2026

ಆನಂದ ಸೃಷ್ಟಿಯ 125ನೇ ವಾರದ ಸೇವಾ ಮೈಲಿಗಲ್ಲು: ಪಡುಕರೆ ಕಡಲತೀರ ಸ್ವಚ್ಛತೆ, ರಿಕ್ಷಾ ನಿಲ್ದಾಣಕ್ಕೆ ಡೂಮ್ ಮಿರರ್ ಕೊಡುಗೆ

ಕೋಟ: ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಸೇವೆಯನ್ನು ಉದ್ದೇಶವಾಗಿಟ್ಟುಕೊಂಡು ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಆನಂದ ಸೃಷ್ಟಿ ಯೋಜನೆಯ 125ನೇ ವಾರದ ಅಂಗವಾಗಿ ಪಡುಕರೆ ಕಡಲತೀರದಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಭಾನುವಾರ ಬೆಳಿಗ್ಗೆ ನಡೆದ ಅಭಿಯಾನದಲ್ಲಿ ಸದಸ್ಯರು ಹಾಗೂ ಸ್ವಯಂಸೇವಕರು ಪಾಲ್ಗೊಂಡು ಕಡಲತೀರದಿಂದ 31 ಚೀಲ ಕಸವನ್ನು ಸಂಗ್ರಹಿಸಿದರು.

ಆನಂದ ಸಿ. ಕುಂದರ್ ಅವರ ಮಾರ್ಗದರ್ಶನದಲ್ಲಿ ಮುಂದುವರಿಯುತ್ತಿರುವ ಆನಂದ ಸೃಷ್ಟಿಯ ಸೇವಾ ಚಟುವಟಿಕೆಗಳ ಭಾಗವಾಗಿ ಈ ಅಭಿಯಾನವನ್ನು ಆಯೋಜಿಸಲಾಗಿತ್ತು. ಪರಿಸರದ ಸ್ವಚ್ಛತೆ, ಕಡಲತೀರಗಳ ಸಂರಕ್ಷಣೆ ಹಾಗೂ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಸ್ವಯಂಸೇವಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು.
ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರ ಸುರಕ್ಷತೆ ಮತ್ತು ವಾಹನ ಸಂಚಾರದ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಪಡುಕರೆ ರಿಕ್ಷಾ ನಿಲ್ದಾಣಕ್ಕೆ ಡೂಮ್ ಮಿರರ್‌ನ್ನು ಕೊಡುಗೆಯಾಗಿ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಶಾಂತ್ ಎ. ಕುಂದರ್ ಅವರ ಉಪಸ್ಥಿತಿಯಲ್ಲಿ ರಿಕ್ಷಾ ನಿಲ್ದಾಣದ ಅಧ್ಯಕ್ಷ ನಾರಾಯಣ ಮೆಂಡನ್ ಅವರಿಗೆ ಡೂಮ್ ಮಿರರ್ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ದಿವ್ಯಲಕ್ಷ್ಮೀ ಪ್ರಶಾಂತ್ ಕುಂದರ್, ವೈಷ್ಣವಿ ರಕ್ಷಿತ್ ಕುಂದರ್, ಶ್ರೀನಿವಾಸ್, ಮಿಥುನ್ ಕುಮಾರ್ ಹಾಗೂ ಜನತಾ ಸದಸ್ಯರು ಉಪಸ್ಥಿತರಿದ್ದರು.
ರವಿಕಿರಣ್ ಕೋಟ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ಪಡುಕೋಣೆ ಪ್ರಾಸ್ತಾವಿಕವಾಗಿ ಮಾತನಾಡಿ, ಆನಂದ ಸೃಷ್ಟಿಯ ಉದ್ದೇಶ ಮತ್ತು ಇದುವರೆಗೆ ಕೈಗೊಂಡಿರುವ ಸೇವಾ ಕಾರ್ಯಗಳ ಕುರಿತು ವಿವರಿಸಿದರು.