ಡೈಲಿವಾರ್ತೆ: 08/ನ./2026

ಕೋಟೇಶ್ವರ: ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ‘ಇನ್ವಿಕ್ಟಸ್-2026’ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ:
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಕ್ರೀಡೆಗೆ ಮಹತ್ವದ ಸ್ಥಾನ – ಸುಭಾಶ್ಚಂದ್ರ ಶೆಟ್ಟಿ

ಕೋಟೇಶ್ವರ: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಜತೆಗೆ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದ ವೃದ್ಧಿಗೂ ಕ್ರೀಡಾ ಚಟುವಟಿಕೆಗಳು ಪೂರಕವಾಗಿವೆ. ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಶಿಸ್ತು, ಆತ್ಮವಿಶ್ವಾಸ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವುದರೊಂದಿಗೆ ಬೌದ್ಧಿಕ ಬೆಳವಣಿಗೆಗೂ ಸಹಕಾರಿಯಾಗಿದೆ ಎಂದು ಬಾಂಡ್ಯಾ ಎಜುಕೇಶನಲ್ ಟ್ರಸ್ಟ್‌ನ ಜಂಟಿ ಕಾರ್ಯನಿರ್ವಾಹಕ ಸುಭಾಶ್ಚಂದ್ರ ಶೆಟ್ಟಿ ಹೇಳಿದರು.

ನ.7ರಂದು ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ‘ಇನ್ವಿಕ್ಟಸ್-2026’ ವಾರ್ಷಿಕ ಕ್ರೀಡಾಕೂಟಕ್ಕೆ ವಿದ್ಯಾರ್ಥಿ ತಂಡಗಳ ನಾಯಕರಿಗೆ ಜರ್ಸಿ ವಿತರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಯೂ ಪಠ್ಯ ಚಟುವಟಿಕೆಗಳ ಜತೆಗೆ ಕ್ರೀಡೆಯಲ್ಲಿಯೂ ಆಸಕ್ತಿ ಬೆಳೆಸಿಕೊಳ್ಳಬೇಕು. ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಕ್ಷಮತೆ ವೃದ್ಧಿಸುವುದರೊಂದಿಗೆ ಸ್ಪರ್ಧಾತ್ಮಕ ಮನೋಭಾವ ಮತ್ತು ಸಾಧಿಸುವ ಛಲ ಬೆಳೆಯುತ್ತದೆ. ವಿದ್ಯಾರ್ಥಿಗಳು ಕ್ರೀಡಾಸಕ್ತಿಯನ್ನು ಜೀವನದ ಭಾಗವಾಗಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವಂತಾಗಬೇಕು ಎಂದು ಅವರು ಹಾರೈಸಿದರು.

ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿ ವಹಿಸಿದ್ದ ಬಾಂಡ್ಯಾ ಎಜುಕೇಶನಲ್ ಟ್ರಸ್ಟ್‌ನ ಜಂಟಿ ಕಾರ್ಯನಿರ್ವಾಹಕಿ ಅನುಪಮಾ ಎಸ್. ಶೆಟ್ಟಿ ಮಾತನಾಡಿ, ವ್ಯಕ್ತಿಯ ಪರಿಪೂರ್ಣ ಬೆಳವಣಿಗೆಗೆ ದೈಹಿಕ, ಮಾನಸಿಕ ಹಾಗೂ ನೈತಿಕ ಮೌಲ್ಯಗಳು ಸಮಾನವಾಗಿ ಅಗತ್ಯವಾಗಿವೆ. ಈ ಮೌಲ್ಯಗಳನ್ನು ಬೆಳೆಸುವಲ್ಲಿ ಕ್ರೀಡೆ ಮಹತ್ವದ ಸಾಧನವಾಗಿದೆ. ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಸಮಾನತೆ, ಸಹಕಾರ ಮತ್ತು ಪರಸ್ಪರ ಗೌರವದ ಮನೋಭಾವವನ್ನು ರೂಪಿಸುತ್ತವೆ. ನಮ್ಮ ನಾಡು ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಗಳನ್ನು ದಾಖಲಿಸುವಂತಾಗಲು ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬೇಕು ಎಂದು ಶುಭ ಹಾರೈಸಿದರು.

ಕಾಲೇಜಿನ ಪ್ರಾಂಶುಪಾಲ ಸಂದೀಪ್ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕುಮಾರಿ ಅಧಿತಿ ಪಟೇಲ್ ಕಾರ್ಯಕ್ರಮ ನಿರೂಪಿಸಿದರು.
ಕುಮಾರಿ ಅರ್ಚನಾ ಪ್ರಾರ್ಥಿಸಿದರು. ಕುಮಾರಿ ಕೀರ್ತನ ವಂದಿಸಿದರು.