ಡೈಲಿವಾರ್ತೆ: 08/ನ./2026

ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣ: ನಾಲ್ವರು ಆರೋಪಿಗಳು ಪೊಲೀಸರ ವಶಕ್ಕೆ

ಉಡುಪಿ: ಪೆರ್ಡೂರು ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಚುರುಕುಗೊಳಿಸಿರುವ ಉಡುಪಿ ಪೊಲೀಸರು ಉತ್ತರ ಪ್ರದೇಶ ಮೂಲದ ಪವನ್ ಕುಮಾರ್ ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಕರಣದ ಆರೋಪಿಗಳ ಪತ್ತೆಗಾಗಿ ವಿಶೇಷ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿದ್ದು, ವಿವಿಧ ಸ್ಥಳಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಆರೋಪಿಗಳ ವಿರುದ್ಧ ಪೊಲೀಸರು ಮುಂದಿನ ಕಾನೂನು ಪ್ರಕ್ರಿಯೆ ಕೈಗೊಂಡಿದ್ದಾರೆ.

ಪ್ರಕರಣದ ತನಿಖೆ ಹಾಗೂ ಆರೋಪಿಗಳ ಪತ್ತೆಗಾಗಿ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು. ಅವರ ಮಾರ್ಗದರ್ಶನದಲ್ಲಿ, ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ಬ್ರಹ್ಮಾವರ ವೃತ್ತ ನಿರೀಕ್ಷಕರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.

ಈ ವಿಶೇಷ ತಂಡವು ನವೆಂಬರ್ 3ರಂದು ಮಧ್ಯಪ್ರದೇಶಕ್ಕೆ ತೆರಳಿ ಕಾರ್ಯಾಚರಣೆ ನಡೆಸಿತು.
ಭೋಪಾಲ್ ರೈಲ್ವೆ ನಿಲ್ದಾಣದ ಸಮೀಪ ಉತ್ತರ ಪ್ರದೇಶದ ಖುಷಿನಗರ ಜಿಲ್ಲೆಯ ಪತ್ರಾವನದ ಸುಖುರ, ಬಂಗಾಲಿ ಪಟ್ಟಿ ನಿವಾಸಿ ಪವನ್ ಕುಮಾರ್ (24) ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ವಶಕ್ಕೆ ಪಡೆದುಕೊಂಡಿತ್ತು.

ಬಳಿಕ ಪವನ್ ಕುಮಾರ್‌ನನ್ನು ನವೆಂಬರ್ 5ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಇನ್ನು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಸುರಕ್ಷತೆಯ ದೃಷ್ಟಿಯಿಂದ ಪರಿವೀಕ್ಷಣಾಲಯದಲ್ಲಿ ಇರಿಸಲಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದ ಉಳಿದ ಇಬ್ಬರು ಆರೋಪಿಗಳಾದ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ವರಂಗ ಗ್ರಾಮದ ಮುನಿಯಾಲು, ವೀರ ಸಾವರ್ಕರ್ ನಗರದ ಗಾಂಧಿ ಮೈದಾನದ ಬಳಿಯ ನಿವಾಸಿ ಆದರ್ಶ ಕಾಂಚನ್ ಹಾಗೂ ಕಾರ್ಕಳ ತಾಲೂಕಿನ ವರಂಗ ಗ್ರಾಮದ ಮುನಿಯಾಲು ಅಂಚೆ ವ್ಯಾಪ್ತಿಯ ನಿವಾಸಿ ದಿನೇಶ್ ಶೆಟ್ಟಿ ಅವರನ್ನು ನವೆಂಬರ್ 7ರ ರಾತ್ರಿ ಕಾರ್ಕಳದಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಕರಣದ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿರುವ ಪೊಲೀಸರು, ವಶಕ್ಕೆ ಪಡೆದಿರುವ ಆರೋಪಿಗಳ ವಿರುದ್ಧ ಕಾನೂನು ಪ್ರಕ್ರಿಯೆ ಕೈಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಮುಂದುವರಿದಿದೆ.