ಡೈಲಿವಾರ್ತೆ: 08/ನ./2026

ಬ್ರಹ್ಮಾವರ: ಸ್ವರ್ಣ ನದಿಯಿಂದ ಅಕ್ರಮವಾಗಿ ಮರಳು ಸಾಗಾಟ – 407 ಟಿಪ್ಪರ್ ವಶಕ್ಕೆ; ಚಾಲಕನ ವಿರುದ್ಧ ಪ್ರಕರಣ ದಾಖಲು

ಬ್ರಹ್ಮಾವರ: ಸ್ವರ್ಣ ನದಿಯಿಂದ ಯಾವುದೇ ಪರವಾನಿಗೆ ಪಡೆಯದೆ ಮರಳು ತೆಗೆದು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಟಿಪ್ಪರ್ ವಾಹನವನ್ನು ಬ್ರಹ್ಮಾವರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸುಮಾರು 9,000 ರೂ. ಮೌಲ್ಯದ 1.5 ಯುನಿಟ್ ಮರಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನದ ಚಾಲಕ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ನ. 8ರಂದು ಬೆಳಗಿನ ಜಾವ ಬ್ರಹ್ಮಾವರ ಪೊಲೀಸ್ ಠಾಣೆಯ ಉಪನಿರೀಕ್ಷಕ ಅಶೋಕ ಮಾಳಬಗಿ ಅವರು ಸಿಬ್ಬಂದಿಯೊಂದಿಗೆ ಇಲಾಖಾ ವಾಹನದಲ್ಲಿ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ, ಬೆಳಗಿನ ಜಾವ 3.30ರ ಸುಮಾರಿಗೆ ಕೆ.ಜಿ. ರಸ್ತೆಯ ಕಮಾನು ಬಳಿ ಮರಳು ತುಂಬಿದ ಅನುಮಾನಾಸ್ಪದ ಟಿಪ್ಪರ್ ವಾಹನ ರಾಷ್ಟ್ರೀಯ ಹೆದ್ದಾರಿಯತ್ತ ಸಾಗುತ್ತಿರುವುದು ಕಂಡುಬಂದಿದೆ. ತಕ್ಷಣ ವಾಹನವನ್ನು ತಡೆದು ಪರಿಶೀಲಿಸಿದಾಗ, ಅದು KA-20-AB-7694 ನೋಂದಣಿ ಸಂಖ್ಯೆಯ ಟಾಟಾ ಕಂಪನಿಯ 407 ಮಾದರಿಯ ಮಿನಿ ಟಿಪ್ಪರ್ ಎಂಬುದು ತಿಳಿದುಬಂದಿದೆ.

ವಾಹನದ ಚಾಲಕನನ್ನು ವಿಚಾರಿಸಿದಾಗ ಬೀರಪ್ಪ ಎಂದು ಗುರುತಿಸಿಕೊಂಡಿದ್ದಾನೆ. ಟಿಪ್ಪರ್‌ನ ಹಿಂಭಾಗದ ಬಾಡಿಯಲ್ಲಿ ಮರಳು ತುಂಬಿರುವುದನ್ನು ಗಮನಿಸಿದ ಪೊಲೀಸರು, ಮರಳಿನ ಮೂಲ ಹಾಗೂ ಸಾಗಾಟಕ್ಕೆ ಅಗತ್ಯವಿರುವ ಪರವಾನಿಗೆಯ ಕುರಿತು ಪ್ರಶ್ನಿಸಿದ್ದಾರೆ. ಈ ವೇಳೆ ಚಾಲಕನು ತನ್ನ ಬಳಿ ಯಾವುದೇ ಅಧಿಕೃತ ಪರವಾನಿಗೆ ಇಲ್ಲವೆಂದು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ವಿಚಾರಣೆ ವೇಳೆ, ಬ್ರಹ್ಮಾವರ ಹಂಗಾರಕಟ್ಟೆಯ ಆಶೀಕ್ ಹಾಗೂ ಆತನ ಸ್ನೇಹಿತ ಪ್ರದೀಪ್ ಅವರ ಸೂಚನೆಯಂತೆ ಸ್ವರ್ಣ ನದಿಯ ಮರಳು ದಕ್ಕೆಗೆ ತೆರಳಿದ್ದಾಗಿ ಚಾಲಕ ತಿಳಿಸಿದ್ದಾನೆ. ಅಲ್ಲಿ ಉಪ್ಪೂರಿನ ಪ್ರಜ್ವಲ್ ಮತ್ತು ಇತರ ಕಾರ್ಮಿಕರು ನದಿಯಿಂದ ಮರಳನ್ನು ತೆಗೆದು ಟಿಪ್ಪರ್‌ಗೆ ತುಂಬಿಸಿಕೊಟ್ಟಿದ್ದರು. ಬಳಿಕ ಆಶೀಕ್ ಮತ್ತು ಪ್ರದೀಪ್ ಅವರು ಮರಳನ್ನು ಬ್ರಹ್ಮಾವರದ ಕಡೆಗೆ ಸಾಗಿಸುವಂತೆ ಸೂಚಿಸಿ ಕಾರಿನಲ್ಲಿ ಮುಂಚಿತವಾಗಿ ತೆರಳಿದ್ದರು. ಅದರಂತೆ ತಾನು ಮರಳು ತುಂಬಿದ ಟಿಪ್ಪರ್ ಅನ್ನು ಚಲಾಯಿಸಿಕೊಂಡು ಬರುತ್ತಿದ್ದುದಾಗಿ ಹೇಳಿದ್ದಾನೆ.

ಪರವಾನಿಗೆ ಇಲ್ಲದೆ ಮರಳು ಸಾಗಾಟ ಮಾಡುತ್ತಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಪೊಲೀಸರು ವಾಹನವನ್ನು ಸುರಕ್ಷತೆಯ ದೃಷ್ಟಿಯಿಂದ ಠಾಣೆಯ ಆವರಣದಲ್ಲಿ ಇರಿಸಿದ್ದರು. ಬಳಿಕ ಪರವಾನಿಗೆ ಹಾಜರುಪಡಿಸುವಂತೆ ಚಾಲಕನಿಗೆ ಸೂಚಿಸಿದರೂ, ಯಾವುದೇ ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗಿಲ್ಲ. ಪಂಚರ ಸಮಕ್ಷಮ ವಾಹನವನ್ನು ಪರಿಶೀಲಿಸಿದಾಗ ಸುಮಾರು 9,000 ರೂ. ಮೌಲ್ಯದ 1.5 ಯುನಿಟ್ ಮರಳು ಪತ್ತೆಯಾಗಿದೆ. ಮರಳು ಸಹಿತ ಟಿಪ್ಪರ್ ವಾಹನವನ್ನು ಮಹಜರು ಪ್ರಕ್ರಿಯೆ ಮೂಲಕ ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ಸರ್ಕಾರದ ಸೊತ್ತಾದ ಮರಳನ್ನು ಯಾವುದೇ ಅಧಿಕೃತ ಅನುಮತಿ ಪಡೆಯದೆ ಹಾಗೂ ಸರ್ಕಾರಕ್ಕೆ ರಾಜಧನ ಪಾವತಿಸದೆ ಸ್ವರ್ಣ ನದಿಯಿಂದ ತೆಗೆದು ಅಕ್ರಮವಾಗಿ ಸಾಗಾಟ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 207/2026ರಂತೆ Mines and Minerals (Development and Regulation) Act, 1957ರ ಕಲಂ 4(1), 4(1A), 21(1), 21(2), Karnataka Minor Mineral Concession Rules, 1944ರ ಕಲಂ 3(1), 42(1), 44 ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 303(2)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.