ಡೈಲಿವಾರ್ತೆ: 08/ನ./2026

ಬೈಂದೂರು: ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಕಾರಿನಲ್ಲಿ ಜಾನುವಾರು ಸಾಗಾಟ – ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು, ಆರೋಪಿಗಳು ಪರಾರಿ!

ಬೈಂದೂರು: ಮಾಂಸಕ್ಕಾಗಿ ಹತ್ಯೆ ಮಾಡುವ ಉದ್ದೇಶದಿಂದ ಮೂರು ಗಂಡು ಕರುಗಳನ್ನು ಕಳವು ಮಾಡಿ ಕಾರಿನಲ್ಲಿ ಸಾಗಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ನ.8ರ ಮುಂಜಾನೆ ಬೈಂದೂರಿನ ಮೈಯಾಡಿಯಲ್ಲಿ ನಡೆದಿದೆ. ಅಪಘಾತದ ಬಳಿಕ ಕಾರಿನಲ್ಲಿದ್ದ ಇಬ್ಬರು ಅಪರಿಚಿತ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ನ.8ರ ಮುಂಜಾನೆ ಇಬ್ಬರು ಅಪರಿಚಿತ ವ್ಯಕ್ತಿಗಳು ಎಲ್ಲಿಂದಲೋ ಮೂರು ಗಂಡು ಕರುಗಳನ್ನು ಕಳವು ಮಾಡಿಕೊಂಡು ಬಂದಿದ್ದು, ಅವುಗಳ ಕಾಲುಗಳಿಗೆ ಹಗ್ಗ ಕಟ್ಟಿ ಹಿಂಸಾತ್ಮಕವಾಗಿ ಕಾರಿನ ಹಿಂಭಾಗದಲ್ಲಿ ತುಂಬಿಸಿಕೊಂಡಿದ್ದರು ಎನ್ನಲಾಗಿದೆ. ಬಳಿಕ ಕೊಲ್ಲೂರು ಕಡೆಯಿಂದ ಬೈಂದೂರು ಕಡೆಗೆ KA-35-N-9164 ನೋಂದಣಿ ಸಂಖ್ಯೆಯ ಸ್ವಿಫ್ಟ್ ಕಾರಿನಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದರು.
ಮುಂಜಾನೆ ಸುಮಾರು 3:20 ಗಂಟೆಗೆ ಮೈಯಾಡಿಯಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಜಖಂಗೊಂಡಿದೆ. ಅಪಘಾತದ ಶಬ್ದ ಕೇಳಿ ಸ್ಥಳಕ್ಕೆ ಬಂದ ಮೈಯಾಡಿ ನಿವಾಸಿ ಬಾಬುರಾವ್ (42) ಅವರನ್ನು ಗಮನಿಸಿದ ಕಾರಿನಲ್ಲಿದ್ದ ಇಬ್ಬರು ಆರೋಪಿಗಳು ತಕ್ಷಣ ವಾಹನದಿಂದ ಇಳಿದು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಬಾಬುರಾವ್ ಅವರು ನೀಡಿದ ದೂರಿನ ಮೇರೆಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 162/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 303(2), 281, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020ರ ಕಲಂ 4, 5 ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಕಲಂ 11(1)(D) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪರಾರಿಯಾಗಿರುವ ಇಬ್ಬರು ಆರೋಪಿಗಳ ಪತ್ತೆ ಹಾಗೂ ಜಾನುವಾರುಗಳ ಕಳವು ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.