


ಡೈಲಿವಾರ್ತೆ: 09/ನ./2026




ಗಂಗೊಳ್ಳಿ: ವಿವಾದಿತ ಜಾಗಕ್ಕೆ ಅಕ್ರಮ ಪ್ರವೇಶದ ಆರೋಪ: ಜೆಸಿಬಿಯಿಂದ ಬೇಲಿ ಹಾನಿ, ವೃದ್ಧ ದಂಪತಿಗೆ ಹಲ್ಲೆ, ಜೀವ ಬೆದರಿಕೆ ಆರೋಪ – ಪ್ರಕರಣ ದಾಖಲು

ಗಂಗೊಳ್ಳಿ: ಪಿತ್ರಾರ್ಜಿತ ಜಾಗದ ಹಕ್ಕು ಸಂಬಂಧ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿರುವ ನಡುವೆಯೇ, ವಿವಾದಿತ ಜಾಗಕ್ಕೆ ಜೆಸಿಬಿ ಯಂತ್ರವನ್ನು ತಂದು ಕಬ್ಬಿಣದ ತಂತಿ ಬೇಲಿಯನ್ನು ಹಾನಿಗೊಳಿಸಿ, ಪ್ರಶ್ನಿಸಿದ ವೃದ್ಧ ದಂಪತಿಯನ್ನು ದೂಡಿ ಹಾಕಿ ಬೆದರಿಕೆ ಹಾಕಿರುವ ಘಟನೆ ಗಂಗೊಳ್ಳಿಯ ಮುಬಾರಕ್ ಮೊಹಲ್ಲಾದಲ್ಲಿ ನಡೆದಿದೆ.
ಗಂಗೊಳ್ಳಿ ಗ್ರಾಮದ ಫಾತಿಮ ಕಂಪೌಂಡ್, ಚರ್ಚ್ ರಸ್ತೆ ನಿವಾಸಿ ನಾಕುದಾ ಶಾವುಲ್ ಹಮೀದ್ (75) ಎಂಬವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ದೂರುದಾರರಿಗೆ ಗಂಗೊಳ್ಳಿ ಗ್ರಾಮದ ಮುಬಾರಕ್ ಮೊಹಲ್ಲಾದ ಸರ್ವೆ ನಂಬರ್ 111/6P2ರಲ್ಲಿ 1.01 ಎಕರೆ ಪಿತ್ರಾರ್ಜಿತ ಜಾಗವಿದೆ. ಈ ಜಾಗದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ದೂರುದಾರರು ಹಾಗೂ ಮುಬಾರಕ್ ಮೊಹಲ್ಲಾ ನಿವಾಸಿ ಹಸೀಬ್ ಎಂಬವರ ನಡುವೆ ವಿವಾದವಿದ್ದು, ಈ ಸಂಬಂಧ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾವೆ ವಿಚಾರಣೆಯಲ್ಲಿದೆ ಎನ್ನಲಾಗಿದೆ.

ಜಾಗದಲ್ಲಿ ಗಿಡಗಂಟಿಗಳು ಬೆಳೆದಿದ್ದ ಹಿನ್ನೆಲೆಯಲ್ಲಿ ದೂರುದಾರರು 2026ರ ಅಕ್ಟೋಬರ್ 30ರಂದು ಸ್ವಚ್ಛತಾ ಕಾರ್ಯ ನಡೆಸಿ, ಕಾಂಕ್ರೀಟ್ ಕಂಬಗಳನ್ನು ನೆಟ್ಟು ಕಬ್ಬಿಣದ ಸರಳುಗಳ ಮೂಲಕ ಬೇಲಿ ನಿರ್ಮಿಸಿದ್ದರು.
ಆದರೆ, ನವೆಂಬರ್ 7ರಂದು ಸಂಜೆ ಸುಮಾರು 4 ಗಂಟೆಗೆ ಅಬ್ದುಲ್ ಸಲಾಂ ಎಂಬವರು KA-06-N-2814 ನೋಂದಣಿ ಸಂಖ್ಯೆಯ ಜೆಸಿಬಿಯನ್ನು ಸ್ಥಳಕ್ಕೆ ತಂದು, ವಿವಾದಿತ ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿ ಕಬ್ಬಿಣದ ತಂತಿ ಬೇಲಿಯನ್ನು ಯಂತ್ರದ ಮೂಲಕ ಹಾನಿಗೊಳಿಸುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ವೇಳೆ ದೂರುದಾರರು ಹಾಗೂ ಅವರ ಪತ್ನಿ ಸಾಬೀರಾ ಬಾನು ಸ್ಥಳಕ್ಕೆ ತೆರಳಿ ಕೃತ್ಯವನ್ನು ಪ್ರಶ್ನಿಸಿದಾಗ, ಅವರನ್ನು ಮುಂದೆ ಸಾಗದಂತೆ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಗಳಿಂದ ದೂಡಿ ಹಾಕಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 51/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 329(3), 324(4), 126(2), 352 ಹಾಗೂ 351(2)ರಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

