


ಡೈಲಿವಾರ್ತೆ: 09/ನ./2026




ಸಾಸ್ತಾನದಲ್ಲಿ ಸ್ಕೂಟರ್ ಡಿಕ್ಕಿಗೆ ಪಾದಚಾರಿ ಸಾವು!

ಕೋಟ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವೇಗವಾಗಿ ಬಂದ ಸ್ಕೂಟರ್ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ವೃದ್ಧರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನ.9ರಂದು ಸಾಸ್ತಾನದಲ್ಲಿ ನಡೆದಿದೆ.
ಐರೋಡಿ ಗ್ರಾಮದ ಟೆಲಿಫೋನ್ ಎಕ್ಸ್ಚೇಂಜ್ ಕಟ್ಟಡ ನಿವಾಸಿ ಹೆನ್ರಿ ಫೆರ್ನಾಂಡಿಸ್ (75) ಮೃತಪಟ್ಟವರು.
ಹೆನ್ರಿ ಫೆರ್ನಾಂಡಿಸ್ ಅವರು ಎಂದಿನಂತೆ ಸೋಮವಾರ ಬೆಳಿಗ್ಗೆ ಸಾಸ್ತಾನದ ಸಂತ ಅಂತೋನಿ ಚರ್ಚ್ನಲ್ಲಿ ನಡೆಯುವ ಪೂಜೆಗೆಂದು ಮನೆಯಿಂದ ತೆರಳುತ್ತಿದ್ದರು. ಈ ವೇಳೆ ಬೆಳಿಗ್ಗೆ ಸುಮಾರು 6.20ಕ್ಕೆ ಗುಂಡ್ಮಿ ಗ್ರಾಮದ ಸಾಸ್ತಾನ ಸರಕಾರಿ ಆಸ್ಪತ್ರೆಯ ಎದುರಿನ ಬ್ರಹ್ಮಾವರ–ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅವರಿಗೆ, ಬ್ರಹ್ಮಾವರ ಕಡೆಯಿಂದ ಕುಂದಾಪುರದತ್ತ ತೆರಳುತ್ತಿದ್ದ KA-20-EH-9260 ನೋಂದಣಿ ಸಂಖ್ಯೆಯ ಸ್ಕೂಟರ್ ಡಿಕ್ಕಿ ಹೊಡೆದಿದೆ.
ಸ್ಕೂಟರ್ ಸವಾರ ವಿಷ್ಣು ಪ್ರಸಾದ್ ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಗೆ ಚಲಿಸಿದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಹೆನ್ರಿ ಫೆರ್ನಾಂಡಿಸ್ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಅವರನ್ನು ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಆದರ್ಶ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಸೋಮವಾರ ಮಧ್ಯಾಹ್ನ 2.03ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಕುರಿತು ಮೃತರ ಪತ್ನಿ ಆಲಿಸ್ ಫೆರ್ನಾಂಡಿಸ್ (73) ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಕೂಟರ್ ಸವಾರನ ವಿರುದ್ಧ ಅಪರಾಧ ಕ್ರಮಾಂಕ 180/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 281 ಹಾಗೂ 106ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

