


ಡೈಲಿವಾರ್ತೆ: 09/ನ./2026




ಕೈಯಲ್ಲಿದ್ದ ₹200 ದಂಡಕ್ಕೆ ಪಾವತಿ.. ಮಗಳ ಹುಟ್ಟುಹಬ್ಬಕ್ಕೆ ಕಣ್ಣೀರಿಟ್ಟ ತಂದೆ – ಅದೇ ಪೊಲೀಸರಿಂದಲೇ ಬಾಲಕಿಯ ಹುಟ್ಟುಹಬ್ಬದ ಆಚರಣೆ: ಹೃದಯ ಗೆದ್ದ ಖಾಕಿ!

ಕೊಟ್ಟಾಯಂ: ಮಗಳ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಾಕೊಲೇಟ್ ಖರೀದಿಸಲು ತೆರಳಿದ್ದ ಬಡ ತಂದೆಯೊಬ್ಬರು, ಸಂಚಾರ ನಿಯಮ ಉಲ್ಲಂಘನೆಗಾಗಿ ಪೊಲೀಸರು ವಿಧಿಸಿದ ದಂಡ ಪಾವತಿಸಿದ ಬಳಿಕ ಮಗಳಿಗೆ ಏನನ್ನೂ ಖರೀದಿಸಲಾಗದ ಅಸಹಾಯಕತೆಯಿಂದ ಕಣ್ಣೀರಿಟ್ಟ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ. ತಂದೆಯ ಸಂಕಷ್ಟವನ್ನು ಅರಿತ ದಂಡ ವಿಧಿಸಿದ ಪೊಲೀಸ್ ಅಧಿಕಾರಿಯೇ ಬಳಿಕ ಮನೆಗೆ ತೆರಳಿ ಪುಟ್ಟ ಬಾಲಕಿಯ ಹುಟ್ಟುಹಬ್ಬವನ್ನು ಆಚರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ನಾಲ್ಕು ವರ್ಷದ ಮಗಳ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಂಗನವಾಡಿಗೆ ಚಾಕೊಲೇಟ್ ತೆಗೆದುಕೊಂಡು ಹೋಗುವ ಉದ್ದೇಶದಿಂದ ತಂದೆಯೊಬ್ಬರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ವಾಹನವನ್ನು ತಡೆದ ಸಬ್ ಇನ್ಸ್ಪೆಕ್ಟರ್ ರವೀಂದ್ರನ್, ಹೆಲ್ಮೆಟ್ ಹಾಗೂ ಸೈಡ್ ಮಿರರ್ ಇಲ್ಲದ ಕಾರಣಕ್ಕೆ ₹250 ದಂಡ ವಿಧಿಸಿದ್ದಾರೆ ಎನ್ನಲಾಗಿದೆ.
ಆದರೆ, ಆ ತಂದೆಯ ಬಳಿ ಇದ್ದದ್ದು ಕೇವಲ ₹200 ಮಾತ್ರ. ದಂಡ ಪಾವತಿಸಲು ತಮ್ಮಲ್ಲಿದ್ದ ಅಷ್ಟೂ ಹಣವನ್ನು ನೀಡಿದ ಅವರು, ಕೈಯಲ್ಲಿ ಇಷ್ಟೇ ಹಣವಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅವರ ಮುಖದಲ್ಲಿದ್ದ ಆತಂಕ ಮತ್ತು ನೋವನ್ನು ಗಮನಿಸಿದ ಪೊಲೀಸರು ವಿಚಾರಿಸಿದಾಗ, ಮರುದಿನ ಮಗಳ ಹುಟ್ಟುಹಬ್ಬವಿದ್ದು, ಆಕೆಗೆ ಚಾಕೊಲೇಟ್ ಖರೀದಿಸಲು ಹೊರಟಿದ್ದ ಸಂಗತಿ ತಿಳಿದುಬಂದಿದೆ.
ಕೆಲವು ದಿನಗಳಿಂದ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿದ್ದ ತಂದೆಗೆ, ದಂಡ ಪಾವತಿಸಿದ ಬಳಿಕ ಮಗಳ ಹುಟ್ಟುಹಬ್ಬಕ್ಕೆ ಏನನ್ನೂ ಖರೀದಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿತ್ತು. ಮಗಳಿಗಾಗಿ ಏನನ್ನಾದರೂ ತೆಗೆದುಕೊಂಡು ಹೋಗಬೇಕೆಂಬ ಆಸೆ ಈಡೇರದ ನೋವಿನಿಂದ ಅವರು ಪೊಲೀಸರ ಎದುರೇ ಕಣ್ಣೀರಿಟ್ಟಿದ್ದಾರೆ.
ತಂದೆಯ ಅಸಹಾಯಕ ಸ್ಥಿತಿಯನ್ನು ಕಂಡ ಸಬ್ ಇನ್ಸ್ಪೆಕ್ಟರ್ ರವೀಂದ್ರನ್ ಅವರ ಮನಸ್ಸು ಕರಗಿದೆ. ತಕ್ಷಣ ತಂದೆಯನ್ನು ತಮ್ಮ ವಾಹನದಲ್ಲಿ ಕೂರಿಸಿಕೊಂಡು ಸ್ಥಳೀಯ ಬಟ್ಟೆ ಅಂಗಡಿಗೆ ತೆರಳಿ ಪುಟ್ಟ ಬಾಲಕಿಗೆ ಹೊಸ ಬಟ್ಟೆ ಖರೀದಿಸಿದ್ದಾರೆ. ಬಳಿಕ ಬೇಕರಿಯಿಂದ ಹುಟ್ಟುಹಬ್ಬದ ಕೇಕ್ ಪಡೆದುಕೊಂಡು ತಂದೆಯೊಂದಿಗೆ ಅವರ ಮನೆಗೆ ತೆರಳಿದ್ದಾರೆ.
ಅಲ್ಲಿ ಬಾಲಕಿಯ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿ, ಕುಟುಂಬದ ಸದಸ್ಯರಲ್ಲಿ ಸಂತಸ ಮೂಡಿಸಿದ್ದಾರೆ.
ದಂಡ ವಿಧಿಸುವ ಮೂಲಕ ತಂದೆಯ ಕಣ್ಣಲ್ಲಿ ನೀರು ತರಿಸಿದ್ದ ಅದೇ ಪೊಲೀಸ್ ಅಧಿಕಾರಿ, ಬಳಿಕ ತಮ್ಮ ಮಾನವೀಯ ನಡೆ ಮೂಲಕ ಆ ಕುಟುಂಬದ ಮುಖದಲ್ಲಿ ನಗು ಮೂಡಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಸಂಚಾರ ನಿಯಮಗಳ ಪಾಲನೆ ಮಾಡಿಸುವುದು ಪೊಲೀಸರ ಕರ್ತವ್ಯವಾದರೂ, ಸಂಕಷ್ಟದಲ್ಲಿರುವವರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಮಾನವೀಯವಾಗಿ ಸ್ಪಂದಿಸುವುದೂ ಸಮಾಜದಲ್ಲಿ ಪೊಲೀಸ್ ಇಲಾಖೆಯ ಗೌರವವನ್ನು ಹೆಚ್ಚಿಸುತ್ತದೆ ಎಂಬುದಕ್ಕೆ ಕೊಟ್ಟಾಯಂನ ಈ ಘಟನೆ ಸಾಕ್ಷಿಯಾಗಿದೆ.

