ಡೈಲಿವಾರ್ತೆ: 09/ನ./2026

ಕೋಟ ಪಂಚವರ್ಣ ಸಂಘಟನೆಯಿಂದ ಸಾಮೂಹಿಕ ಗೋ ಪೂಜೆ: ಗೋವಿನ ಮಹತ್ವ ಯುವಜನತೆಗೆ ತಿಳಿಸುವ ಅಗತ್ಯವಿದೆ – ಡಾ. ಕೃಷ್ಣ ಕಾಂಚನ್

ಕೋಟ: ಆಧುನಿಕ ಜೀವನಶೈಲಿಯ ಪ್ರಭಾವದಿಂದ ಸಾಂಪ್ರದಾಯಿಕ ಗೋಸಾಕಣೆ ಪದ್ಧತಿ ಕ್ರಮೇಣ ಕುಂಠಿತವಾಗುತ್ತಿದ್ದು, ಇಂದಿನ ಯುವಜನತೆ ಗೋವಿನ ಮಹತ್ವವನ್ನು ಅರಿತು ಗೋಸಾಕಣೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕಿದೆ ಎಂದು ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ. ಕೆ. ಕೃಷ್ಣ ಕಾಂಚನ್ ಹೇಳಿದರು.

ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಅದರ ಪ್ರವರ್ತಿತ ಸಂಸ್ಥೆಯಾದ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ, ಕೋಟ ಸಹಕಾರಿ ವ್ಯವಸಾಯಕ ಸಂಘದ ಸಹಯೋಗದೊಂದಿಗೆ ಕೋಡಿ ಕನ್ಯಾಣದ ಸದಾಶಿವ ಐತಾಳ್ ಅವರ ಮನೆಯಂಗಳದಲ್ಲಿ ಸೋಮವಾರ ಆಯೋಜಿಸಲಾದ ಐದನೇ ವರ್ಷದ ಗೋ ಆರಾಧನೆ ಹಾಗೂ ಸಾಮೂಹಿಕ ಗೋ ಪೂಜಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯರು ಅನುಸರಿಸಿಕೊಂಡು ಬಂದ ಮೌಲ್ಯಯುತ ಸಂಪ್ರದಾಯಗಳು ಮತ್ತು ಪರಂಪರೆಗಳನ್ನು ಇಂದಿನ ಆಧುನಿಕ ಜೀವನದ ಭರಾಟೆಯಲ್ಲಿ ಮರೆಯುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಅದರಲ್ಲೂ ಕೃಷಿ ಮತ್ತು ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿರುವ ಗೋಸಾಕಣೆ ಕ್ಷೇತ್ರದಲ್ಲಿ ಆಸಕ್ತಿ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ನಿಟ್ಟಿನಲ್ಲಿ ಕೋಟ ಸಹಕಾರಿ ವ್ಯವಸಾಯಕ ಸಂಘವು ಕ್ಷೀರ ಸಂಜೀವಿನಿ ಯೋಜನೆಯ ಮೂಲಕ ಹೈನುಗಾರಿಕೆಗೆ ಉತ್ತೇಜನ ನೀಡುವ ಹೊಸ ಪ್ರಯತ್ನಕ್ಕೆ ಮುಂದಾಗಿದೆ ಎಂದರು.

ಪಂಚವರ್ಣ ಸಂಘಟನೆಯು ಗೋ ಪೂಜೆಯಂತಹ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಗೋವಿನ ಮಹತ್ವವನ್ನು ಸಮಾಜಕ್ಕೆ ಪರಿಚಯಿಸುವುದರ ಜೊತೆಗೆ ಮಹತ್ವದ ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಕೋಡಿ ಕನ್ಯಾಣದ ಸದಾಶಿವ ಐತಾಳ್ ಅವರ ಮನೆಯಲ್ಲಿ ದೀರ್ಘಕಾಲದಿಂದ ಸಾಕಲ್ಪಡುತ್ತಿರುವ ಗೋವುಗಳು ಅವರ ಗೋಸೇವೆಯ ಬದ್ಧತೆ ಮತ್ತು ಕಾಳಜಿಗೆ ಸಾಕ್ಷಿಯಾಗಿವೆ. ನಿಸ್ವಾರ್ಥವಾಗಿ ಗೋಸೇವೆ ಮಾಡುತ್ತಿರುವ ಸದಾಶಿವ ಐತಾಳ್ ದಂಪತಿಗಳ ಕಾರ್ಯ ಅಭಿನಂದನಾರ್ಹ ಎಂದು ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ಹಿರಿಯ ಹೈನುಗಾರ ಸದಾಶಿವ ಐತಾಳ್ ಹಾಗೂ ಅವರ ಪತ್ನಿ ಗೋವುಗಳಿಗೆ ಪೂಜೆ ಸಲ್ಲಿಸಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೋಟ ಸಹಕಾರಿ ವ್ಯವಸಾಯಕ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ, ಕರ್ನಾಟಕ ಬ್ಯಾಂಕ್‌ನ ನಿವೃತ್ತ ಪ್ರಬಂಧಕ ಕೋಡಿ ಚಂದ್ರಶೇಖರ ನಾವಡ, ಪಂಚವರ್ಣ ಸಂಘಟನೆಯ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಅಧ್ಯಕ್ಷ ಮನೋಹರ್ ಪೂಜಾರಿ ಹಾಗೂ ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು.

ಸಂಸ್ಥೆಯ ಗೌರವ ಸಲಹೆಗಾರ್ತಿ ಪೂರ್ಣಿಮಾ ಅಧಿಕಾರಿ ಸ್ವಾಗತಿಸಿ, ಗೋವಿನ ಮಹತ್ವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ಕೋಟ ವಂದಿಸಿ, ಕಾರ್ಯಕ್ರಮ ಸಂಯೋಜಿಸಿದರು.